ನಿನ್ನೆ ಬೆಳಗ್ಗೆಯವರೆಗೂ ಚೆನ್ನಾಗೇ ಇದ್ದ ನಟ ಪುನೀತ್ ರಾಜ್ಕುಮಾರ್ ಅಗಲಿಕೆಯನ್ನು ಅರಗಿಸಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲ. ಚಂದನವನದಲ್ಲಿ ಬಾಲ ನಟನಾಗಿ, ನಾಯಕನಟನಾಗಿ ಅತ್ಯದ್ಭುತವಾಗಿ ಅಭಿನಯಿಸುತ್ತಿದ್ದ ಅಭಿಮಾನಿಗಳ ಅಪ್ಪು ದೊಡ್ಮನೆ ಕುಟುಂಬದ ಹೆಸರನ್ನು ಉತ್ತುಂಗಕ್ಕೆ ಏರಿಸಿದ್ದರು.
ನಟ ಪುನೀತ್ರಾಜ್ಕುಮಾರ್ ನಿಧನದ ಬಳಿಕ ಅವರನ್ನೇ ನಂಬಿ ಬಂಡವಾಳ ಹಾಕಲು ಸಿದ್ಧರಿದ್ದ ನಿರ್ಮಾಪಕರಿಗೆ ದಿಕ್ಕೇ ತೋಚದಂತಹ ಪರಿಸ್ಥಿತಿ ಎದುರಾಗಿದೆ. ಭಾರೀ ಮೊತ್ತದ ಸಿನಿಮಾಗಳಲ್ಲೇ ನಟಿಸುತ್ತಿದ್ದ ಪುನೀತ್ರ ಬಹುತೇಕ ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡುತ್ತಿದ್ದವು. ಹೀಗಾಗಿ ಅಪ್ಪುರನ್ನು ನಂಬಿ ಕೋಟಿಗಟ್ಟಲೇ ಬಂಡವಾಳ ಹೂಡಿದರೂ ಹಣ ವಾಪಾಸ್ ಬರುತ್ತೆ ಎಂಬ ನಂಬಿಕೆ ನಿರ್ಮಾಪಕರದ್ದು.
ಇತ್ತೀಚೆಗಷ್ಟೇ ʼಜೇಮ್ಸ್ʼ ಚಿತ್ರದ ಭಾಗಶಃ ಶೂಟಿಂಗ್ ಮುಗಿಸಿದ್ದ ನಟ ಪುನೀತ್ ಕೈಯಲ್ಲಿ ಇನ್ನೂ ಐದು ಸಿನಿಮಾಗಳು ಇದ್ದವು. ಇದರಲ್ಲಿ ಮೂರು ಸಿನಿಮಾಗಳನ್ನು ಅನೌನ್ಸ್ ಮಾಡಲಾಗಿತ್ತು. ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದ ʼಜೇಮ್ಸ್ʼ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿತ್ತು. ಇದಾದ ಬಳಿಕ ನಟ ಪುನೀತ್, ಪವನ್ ಕುಮಾರ್ ನಿರ್ದೇಶನದ ದ್ವಿತ್ವ ಸಿನಿಮಾದಲ್ಲಿ ನಟಿಸುವವರಿದ್ದರು.
ಇನ್ನು ನಿರ್ದೇಶಕ ಕೃಷ್ಣ ಕೂಡ ಪುನೀತ್ ರಾಜ್ಕುಮಾರ್ರಿಗಾಗಿ ಕತೆಯೊಂದನ್ನು ಹೆಣೆದಿದ್ದರು. ರಾ ಏಜೆಂಟ್ ಆಗಿ ಈ ಸಿನಿಮಾದ ಮೂಲಕ ನಟ ಪುನೀತ್ ತೆರೆ ಮೇಲೆ ಕಾಣಿಸಿಕೊಳ್ಳುವವರಿದ್ದರು. ಇದು ಮಾತ್ರವಲ್ಲದೇ ದಿನಕರ್ ತೂಗುದೀಪ್ ಅವರ ಸಿನಿಮಾದಲ್ಲಿ ನಟಿಸುವುದಾಗಿಯೂ ಪವರ್ ಸ್ಟಾರ್ ಸಹಿ ಹಾಕಿದ್ದರು. ಮಾತ್ರವಲ್ಲದೇ ಈ ಹಿಂದೆ ಪ್ರಥ್ವಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಿರ್ದೇಶಕ ಜೇಕಬ್ ವರ್ಗೀಸ್ ಜೊತೆ ಮತ್ತೊಂದು ಪ್ರಾಜೆಕ್ಟ್ ಮಾಡಲು ಪುನೀತ್ ಮನಸ್ಸು ಮಾಡಿದ್ದರು ಎನ್ನಲಾಗಿದೆ.
ಜೇಮ್ಸ್ ಸಿನಿಮಾಗೆ ಬರೋಬ್ಬರಿ 8 ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದೆ. ಇವೆಲ್ಲದರ ಜೊತೆಗೆ ನಟ ಪುನೀತ್ ತಮ್ಮ ಹೋಂ ಬ್ಯಾನರ್ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, ಒನ್ ಕಟ್ ಟು ಕಟ್ ಹಾಗೂ ಫ್ಯಾಮಿಲಿ ಪ್ಯಾಕ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು ಎನ್ನಲಾಗಿದೆ.