ಪುಣೆ: ಮಹಾರಾಷ್ಟ್ರದ ಪುಣೆಯಿಂದ ವರದಿಯಾದ ನಾಚಿಕೆಗೇಡಿನ ಘಟನೆಯೊಂದರಲ್ಲಿ 25 ವರ್ಷದ ಯುವಕನೊಬ್ಬ ನಿದ್ದೆ ಮಾಡುತ್ತಿದ್ದ ಅಕ್ಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆ ಎಚ್ಚರವಾಗಿ ಪ್ರತಿಭಟಿಸಿದಾಗ ಹಲಗೆಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ.
ಪುಣೆಯ ಪಿಂಪ್ರಿ-ಚಿಂಚ್ವಾಡ್ ನ ಭೋಸಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 33 ವರ್ಷದ ಮಹಿಳೆಗೆ ಮದುವೆಯಾಗಿ ಗಂಡನಿಂದ ದೂರವಾಗಿರುವ ಆಕೆ ತವರು ಮನೆಯಲ್ಲಿದ್ದಾಳೆ. ಮಾದಕ ದ್ರವ್ಯ ಮತ್ತು ಮದ್ಯವ್ಯಸನಿಯಾಗಿದ್ದ ಕಿರಿಯ ಸಹೋದರ ಮಲಗಿದ್ದಾಗ ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಇದರಿಂದ ಎಚ್ಚರವಾಗಿ ಕೂಗಾಡಿದಾಗ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಅಲ್ಲದೇ, ತಾಯಿಯ ಮೇಲೆ ಕೂಡ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸೆಪ್ಟೆಂಬರ್ ತಿಂಗಳಿನಿಂದಲೂ ಆರೋಪಿ ಅಕ್ಕನೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದ. ಜಗಳದ ನಂತರ ಅವರು ಪೊಲೀಸ್ ಠಾಣೆಗೆ ಬಂದಿದ್ದರು. ಆದರೆ, ಕುಟುಂಬದವರು ದೂರು ನೀಡಿರಲಿಲ್ಲ. ಈಗ ದೂರು ನೀಡಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.