ಬಸ್ ಚಾಲಕ ಮೂರ್ಛೆ ಹೋದಮೇಲೆ, ಪುಟಾಣಿ ಮಕ್ಕಳು ಮಹಿಳೆಯರಿದ್ದ ಮಿನಿಬಸ್ ಓಡಿಸಿ ಎಲ್ಲರನ್ನು ಅವರವರ ಮನೆಗೆ ಸುರಕ್ಷಿತವಾಗಿ ತಲುಪಿಸಿದ 42 ವರ್ಷದ ದಿಟ್ಟ ಮಹಿಳೆ ಯೋಗಿತಾ ಸತವ್.
ಜನವರಿ 7ನೇ ತಾರೀಖಿನಂದು, ಯೋಗಿತಾ ಸತವ್ ಸೇರಿದಂತೆ ಹಲವು ತಾಯಂದಿರು ತಮ್ಮ ಪುಟಾಣಿ ಮಕ್ಕಳೊಂದಿಗೆ ಪುಣೆ ಸಮೀಪದ ಶಿರೂರಿನಲ್ಲಿರುವ ಕೃಷಿ-ಪ್ರವಾಸೋದ್ಯಮ ಕೇಂದ್ರಕ್ಕೆ ಪಿಕ್ನಿಕ್ ಗೆ ಹೋಗಿದ್ದರು. ಪ್ರವಾಸ ಮುಗಿಸಿ ವಾಪಸ್ಸು ಬರುತ್ತಿರುವಾಗ ದಾರಿಯಲ್ಲಿ, ಚಾಲಕನಿಗೆ ಮೂರ್ಛೆಯ ಲಕ್ಷಣಗಳು ಕಾಣಿಸಿಕೊಂಡಿದೆ ಆತ ತಕ್ಷಣ ಬಸ್ ನಿಲ್ಲಿಸಿದ್ದಾನೆ. ದುರದೃಷ್ಟವಶಾತ್ ಆತ ನಿರ್ಜನ ರಸ್ತೆಯ ಮಧ್ಯದಲ್ಲಿ ವಾಹನವನ್ನು ನಿಲ್ಲಿಸಿ ಮೂರ್ಛೆ ಹೋಗಿದ್ದಾನೆ.
ಬಸ್ ನಿರ್ಜನ ರಸ್ತೆಯಲ್ಲಿ ನಿಂತಿದ್ದರಿಂದ ವಾಹನದಲ್ಲಿದ್ದ ಮಕ್ಕಳು, ಮಹಿಳೆಯರು ಭಯಬೀತರಾಗಿ ಅಳಲು ಪ್ರಾರಂಭಿಸಿದರು. ಆಗ ಯೋಗಿತಾ ಸತವ್ ಅವರು ದೈರ್ಯ ವಹಿಸಿ ಬಸ್ ಅನ್ನು ತಮ್ಮ ಕಂಟ್ರೋಲ್ ಗೆ ತೆಗೆದುಕೊಂಡರು. ಮೊದಲು ಮೂರ್ಛೆ ಹೋಗಿದ್ದ ಚಾಲಕನನ್ನು ಆಸ್ಪತ್ರೆಗೆ ತಲುಪಿಸಿ ನಂತರ ಉಳಿದವರನ್ನ ಅವರವರ ಮನೆಗೆ ತಲುಪಿಸಿದರು.
ನನಗೆ ಕಾರ್ ಓಡಿಸುವುದು ಗೊತ್ತಿದ್ದುದರಿಂದ ಆ ನಿರ್ಜನ ಪ್ರದೇಶದಲ್ಲಿ ಯಾರಿಗಾದರು ಕಾಯುವ ಬದಲು ನಾನೇ ಬಸ್ಸನ್ನು ಚಲಾಯಿಸಲು ನಿರ್ಧರಿಸಿದೆ. ಚಾಲಕನಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡುವುದು ಪ್ರಮುಖ ಕಾರ್ಯವಾಗಿತ್ತು. ಹಾಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದೆ, ಎಂದು ಯೋಗಿತಾ ಸತವ್ ಹೇಳಿದ್ದಾರೆ.
ಸತವ್ ಅವರು ಒಟ್ಟು 10 ಕಿ.ಮೀ ದೂರ ಬಸ್ ಓಡಿಸಿ ಎಲ್ಲರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಸತವ್ ಅವರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.