ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ 23 ವರ್ಷದ ವಿವಾಹಿತೆ ಪಾನಿ ಪುರಿ ವಿಚಾರವಾಗಿ ಪತಿಯ ಜೊತೆ ಜಗಳ ಮಾಡಿಕೊಂಡ ಬಳಿಕ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಪತಿಯು ಪತ್ನಿಗೆ ಮಾಹಿತಿ ನೀಡದೆಯೇ ಮನೆಗೆ ಪಾನಿಪುರಿ ಪಾರ್ಸೆಲ್ ತಂದಿದ್ದ. ಆದರೆ ಮೃತ ಪತ್ನಿ ಮೊದಲೇ ಮನೆಯಲ್ಲಿ ಅಡುಗೆ ಮಾಡಿದ್ದಳು. ಇದೇ ವಿಚಾರಕ್ಕೆ ಪತಿ – ಪತ್ನಿ ನಡುವೆ ಕಲಹ ಉಂಟಾಗಿದೆ. ಇದರಿಂದ ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ಮಹಿಳೆ ಪ್ರತೀಕ್ಷಾ ಸರವಾಡೆ ಹಾಗೂ ಗಹಿನಿನಾಥ್ 2019ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರ ದಾಂಪತ್ಯದಲ್ಲಿ ಪದೇ ಪದೇ ಕಲಹ ಉಂಟಾಗುತ್ತಿತ್ತು ಎನ್ನಲಾಗಿದೆ.
ಭಾರತಿ ವಿದ್ಯಾಪೀಠ ಠಾಣೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಶುಕ್ರವಾರದಂದು ಪತ್ನಿಗೆ ಮೊದಲೇ ತಿಳಿಸದೇ ಪತಿಯು ಮನೆಗೆ ಪಾನಿಪುರಿಯನ್ನು ತಂದಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಕಲಹ ಏರ್ಪಟ್ಟಿತ್ತು. ಇದರಿಂದ ಕೋಪಗೊಂಡಿದ್ದ ಪ್ರತೀಕ್ಷಾ ಮಾರನೇ ದಿನ ವಿಷ ವಸ್ತುವನ್ನು ಸೇವಿಸಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆ ಸಾಗಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಪೊಲೀಸರು ಮೃತ ಪ್ರತೀಕ್ಷಾ ಪತಿಯ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ದಂಪತಿಗೆ 18 ತಿಂಗಳ ಮಗು ಕೂಡ ಇದೆ. ಪೊಲೀಸರು ಆರೋಪಿ ಗಹಿನಿನಾಥ್ನನ್ನು ಬಂಧಿಸಿದ್ದಾರೆ.