ವೆಬ್ ಸೀರೀಸ್ ನಲ್ಲಿ ನಟಿಸುತ್ತಿದ್ದ ಕರ್ನಾಟಕ ಮೂಲದ ನಟಿಯೊಬ್ಬರು ಮಹಾರಾಷ್ಟ್ರದ ಪುಣೆ ಪೊಲೀಸ್ ಠಾಣೆಯ ಮಹಿಳಾ ಪೇದೆ ಕೈ ಕಚ್ಚಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಇದೀಗ 28 ವರ್ಷದ ನಟಿಯನ್ನು ಬಂಧಿಸಲಾಗಿದೆ.
ಶುಕ್ರವಾರದಂದು ಈ ಘಟನೆ ನಡೆದಿದ್ದು ಪ್ರಸ್ತುತ ಮುಂಬೈನ ಅಂಧೇರಿಯಲ್ಲಿ ವಾಸಿಸುತ್ತಿರುವ ಈ ನಟಿ ಕಾರ್ಯನಿಮಿತ್ತ ಪುಣೆಗೆ ತೆರಳಿದ್ದರು. ಅದಕ್ಕೂ ಮುನ್ನ ಆನ್ಲೈನ ಮೂಲಕ ಪುಣೆಯ ಶೇರಿ ಏರಿಯಾದಲ್ಲಿರುವ ವಡಂಗಾವ್ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿದ್ದರು.
ನಟಿ ಹೋಟೆಲ್ಗೆ ಹೋದಾಗ ಅಲ್ಲಿನ ಅವ್ಯವಸ್ಥೆ ಕಂಡು ಸಿಡಿಮಿಡಿಗೊಂಡಿದ್ದು, ತಮ್ಮ ಹಣ ಮರಳಿಸುವಂತೆ ಪಟ್ಟು ಹಿಡಿದಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ಹಾಗೂ ನಟಿ ನಡುವೆ ಮಾತಿನ ಚಕಮಕಿ ನಡೆದಿದೆ.
ಆಗ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದು, ದಾಮಿನಿ ಸ್ಕ್ವಾಡ್ ಅನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ. ಸಮಸ್ಯೆ ಪರಿಹರಿಸಲು ಪೊಲೀಸರು ಯತ್ನಿಸುತ್ತಿರುವಾಗಲೇ ನಟಿ ಏಕಾಏಕಿ ಮಹಿಳಾ ಪೇದೆ ಪರ್ವೀನ್ ಶೇಕ್ ಅವರ ಕೈಕಚ್ಚಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಮಹಿಳಾ ಪೇದೆ ಪರ್ವೀನ್ ಶೇಕ್ ಈಗ ಚಂದನ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಟಿ ವಿರುದ್ಧ ಸರ್ಕಾರಿ ಉದ್ಯೋಗಿಗೆ ತನ್ನ ಕಾರ್ಯ ನಿರ್ವಹಿಸಲು ಅಡ್ಡಿಪಡಿಸಿದ್ದು ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿ ಬಂಧಿಸಲಾಗಿದೆ.