ಪುಣೆ: ಆರು ವರ್ಷದ ವಿದ್ಯಾರ್ಥಿಯೊಬ್ಬನ ಕೈಬರಹ ಚೆನ್ನಾಗಿ ಇಲ್ಲ ಎನ್ನುವ ಕಾರಣಕ್ಕೆ ಶಿಕ್ಷಕಿಯೊಬ್ಬಳು ಆತನನ್ನು ಥಳಿಸಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಈ ಆರೋಪದ ಮೇಲೆ ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವನವಾಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಶಿಕ್ಷಕಿ ವಿರುದ್ಧ ನಾನ್-ಕಾಗ್ನಿಜಬಲ್ (ಎನ್‌ಸಿ) ಅಪರಾಧವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ..
ವಿದ್ಯಾರ್ಥಿಯ ಕೈಬರಹ ಚೆನ್ನಾಗಿಲ್ಲ ಎಂದು ಕೋಪಗೊಂಡಿದ್ದ ಈ ಶಿಕ್ಷಕಿ ಕಳೆದ ಅಕ್ಟೋಬರ್ 20 ರಂದು ಶಾಲೆಯಲ್ಲಿ ಬಾಲಕನನ್ನು ಚೆನ್ನಾಗಿ ಥಳಿಸಿದ್ದೂ ಅಲ್ಲದೇ ಈ ವಿಷಯವನ್ನು ಎಲ್ಲಿಯೂ ಬಾಯಿ ಬಿಡದಂತೆ ಧಮ್ಕಿಯನ್ನೂ ಹಾಕಿದ್ದಾಳೆ!
ಮಗು ತನ್ನ ಪಾಲಕರಿಗೆ ವಿಷಯ ತಿಳಿಸಿದಾಗ ಇದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಶಿಕ್ಷಕಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.