ಕೊರೊನಾ ರೂಪಾಂತರ ಭಯ ಶುರುವಾಗಿದೆ. ಅನೇಕ ದೇಶಗಳು ಕೋವಿಡ್ ಲಸಿಕೆಯ ಮೂರನೇ ಬೂಸ್ಟರ್ ಡೋಸ್ ಗೆ ಅನುಮೋದನೆ ನೀಡಿವೆ. ಭಾರತದಲ್ಲಿ ಈ ಬಗ್ಗೆ ಯಾವುದೇ ಘೋಷಣೆಯಾಗಿಲ್ಲ. ಪುರಂನ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಧ್ಯಕ್ಷ, ಸೈರಸ್ ಪೂನವಲ್ಲ, ಕೋವಿಡ್ -19 ಲಸಿಕೆಯ ಮೂರನೇ ಡೋಸನ್ನು 6 ತಿಂಗಳ ನಂತರ ತೆಗೆದುಕೊಳ್ಳಬೇಕು ಎಂದಿದ್ದಾರೆ. ಹಾಗೆ ಮೊದಲ ಎರಡು ಡೋಸ್ ಮಧ್ಯೆ 2 ತಿಂಗಳ ಅಂತರವಿರಬೇಕೆಂದಿದ್ದಾರೆ.
ವರದಿ ಪ್ರಕಾರ, ಎರಡು ಡೋಸ್ ಪಡೆದ ಕೆಲ ಸಮಯದ ನಂತ್ರ ಪ್ರತಿಕಾಯಗಳು ಕಡಿಮೆಯಾಗುತ್ತವೆ. ಆದ್ರೆ ಮೆಮೊರಿ ಸೆಲ್ಸ್ ಹಾಗೆ ಇರುತ್ತದೆ ಎಂದು ಅವರು ಹೇಳಿದ್ದಾರೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಎಸ್‌ಐಐ ತಯಾರಿಸಿದ ಆಕ್ಸ್ ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯ ಆವೃತ್ತಿ ಕೋವಿಶೀಲ್ಡ್.
ಈ ವರ್ಷದ ಆರಂಭದಲ್ಲಿ ಭಾರತ ಸರ್ಕಾರ, ತುರ್ತು ಬಳಕೆಗೆ ಅನುಮತಿ ನೀಡಿತ್ತು. 6 ತಿಂಗಳ ನಂತರ ಕೋವಿಶೀಲ್ಡ್ ಪ್ರತಿಕಾಯಗಳು ಕಡಿಮೆಯಾಗುತ್ತವೆ. ಹಾಗಾಗಿ, ಮೂರನೇ ಡೋಸ್ ತೆಗೆದುಕೊಂಡಿದ್ದೇನೆ. ಸುಮಾರು 8 ಸಾವಿರ ಉದ್ಯೋಗಿಗಳಿಗೆ ಮೂರನೇ ಡೋಸ್ ಕೂಡ ನೀಡಿದ್ದೇವೆ. 2 ಡೋಸ್‌ಗಳನ್ನು ಪೂರ್ಣಗೊಳಿಸಿದವರು, 6 ತಿಂಗಳ ನಂತರ ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ವಿನಂತಿಸುತ್ತೇನೆಂದು ಪೂನವಲ್ಲಾ ಹೇಳಿದ್ದಾರೆ.
ಮಾರಕ ಕೊರೊನಾ ವೈರಸ್ ಎದುರಿಸಲು ಲಾಕ್‌ಡೌನ್ ಜಾರಿಗೊಳಿಸುವ ಬಗ್ಗೆ ಮಾತನಾಡಿದ ಅವರು, ಪರಿಣಾಮಕಾರಿ ಮಾರ್ಗವಲ್ಲ ಎಂದಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಲಾಕ್ ಡೌನ್ ಮಾಡಬೇಕು ಎಂದಿದ್ದಾರೆ. ಹಾಗೆ ಅನೇಕರ ಸಾವಿಗೆ ಅವರ ನಿರ್ಲಕ್ಷ್ಯ ಹಾಗೂ ಕೊನೆ ಕ್ಷಣದಲ್ಲಿ ಆಸ್ಪತ್ರೆ ತಲುಪಿರುವುದು ಕಾರಣ ಎಂದಿದ್ದಾರೆ.