ಪುಣೆ: ಪೋರ್ಷೆ ಅಪಘಾತದ ಪ್ರಕರಣದಲ್ಲಿ ಆರೋಪಿ ಬಾಲಕನ ರಕ್ತದ ಮಾದರಿಗಳನ್ನು ಬದಲಿಸಿದ್ದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈನಲ್ಲಿ ತಲೆಮರಿಸಿಕೊಂಡಿದ್ದ ಅಪ್ರಾಪ್ತ ಆರೋಪಿಯ ತಾಯಿ ಶಿವಾನಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಮಗನ ರಕ್ತದ ಮಾದರಿಯನ್ನು ಶಿವಾನಿ ಬದಲಿಸಿದ್ದರು. ಆತನ ರಕ್ತದ ಬದಲಿಗೆ ತನ್ನ ರಕ್ತದ ಮಾದರಿಯನ್ನು ನೀಡಿದ್ದರು.
ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ 17ರ ಹರೆಯದ ಆರೋಪಿಯ ತಾಯಿ ಶಿವಾನಿ ಅಗರ್ವಾಲ್ ಅವರ ರಕ್ತದ ಮಾದರಿಗಳನ್ನು ಬದಲಾಯಿಸಲಾಗಿದೆ ಎಂದು ಪುಣೆ ಪೊಲೀಸರು ದೃಢಪಡಿಸಿದ ನಂತರ ಅವರನ್ನು ಬಂಧಿಸಲಾಗಿದೆ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಶನಿವಾರ ತಿಳಿಸಿದ್ದಾರೆ. .
ಅಪ್ರಾಪ್ತ ಆರೋಪಿಯ ತಾಯಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿರುವ ರಕ್ತದ ಮಾದರಿ ಮ್ಯಾನಿಪ್ಯುಲೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಬಂಧಿಸಲಾಗಿದೆ.
17 ವರ್ಷದ ಅಪ್ರಾಪ್ತ ಬಾಲಕನನ್ನು ಅಬ್ಸರ್ವೇಶನ್ ಹೋಮ್‌ಗೆ ಕಳುಹಿಸಲಾಗಿದ್ದು, ಆತನ ತಂದೆ, ರೀಲರ್ ವಿಶಾಲ್ ಅಗರ್ವಾಲ್ ಮತ್ತು ಅಜ್ಜ ಸುರೇಂದ್ರ ಅಗರ್ವಾಲ್ ಅವರನ್ನು ಕುಟುಂಬದ ಚಾಲಕನನ್ನು ಅಪಹರಿಸಿ ಆರೋಪ ಹೊರಿಸುವಂತೆ ಒತ್ತಡ ಹೇರಿದ್ದಕ್ಕಾಗಿ ಬಂಧಿಸಲಾಗಿದೆ.
ಇದಕ್ಕೂ ಮುನ್ನ ಅಪಘಾತದ ಸಮಯದಲ್ಲಿ ಅಪ್ರಾಪ್ತ ಕುಡಿದಿರಲಿಲ್ಲ ಎಂದು ತೋರಿಸಲು ರಕ್ತದ ಮಾದರಿಗಳನ್ನು ಬದಲಿಸಿದ್ದ ಇಬ್ಬರು ವೈದ್ಯರಾದ ಡಾ. ಶ್ರೀಹರಿ ಹಾರ್ನೋರ್ ಮತ್ತು ಡಾ. ಅಜಯ್ ತಾವರೆ ಮತ್ತು ಆಸ್ಪತ್ರೆಯ ನೌಕರ ಅತುಲ್ ಘಾಟ್‌ಕಾಂಬಳೆ ಅವರನ್ನು ಬಂಧಿಸಲಾಗಿತ್ತು.