ಸಂಚಾರ ನಿಯಮಗಳ ಉಲ್ಲಂಘಿಸುವವರಿಗೆ ಬಹುತೇಕ ಸಂದರ್ಭಗಳಲ್ಲಿ ಸ್ಥಳದಲ್ಲಿಯೇ ದಂಡ ವಿಧಿಸಲಾಗುತ್ತದೆ. ಒಂದೊಮ್ಮೆ ಪ್ರಕರಣ ಗಂಭೀರವಾಗಿದ್ದರೆ ನ್ಯಾಯಾಲಯಕ್ಕೂ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ.
ಪುಣೆಯ ಕಲ್ಯಾಣಿ ನಗರ ಏರಿಯಾದಲ್ಲಿ ಮಧ್ಯರಾತ್ರಿ ವೇಳೆಗೆ ಅಲ್ಲಿನ ಟ್ರಾಫಿಕ್ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಯುವಕರಿದ್ದ ಗುಂಪೊಂದು ಕಾರಿನಲ್ಲಿ ಬಂದಿದ್ದು, ಇವರುಗಳು ಸಾನಸ್ವಾಡಿಯಿಂದ ಪುಣೆಗೆ ತೆರಳುತ್ತಿದ್ದರು ಎನ್ನಲಾಗಿದೆ.
ಇವರುಗಳಿದ್ದ ಕಾರನ್ನು ತಪಾಸಣೆಗೆ ನಿಲ್ಲಿಸಿದ ಪೊಲೀಸರು ಕೆಲವೊಂದು ನಿಯಮ ಉಲ್ಲಂಘಿಸಿದ ಕಾರಣಕ್ಕೆ ಚಾಲಕನಿಗೆ ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲ, ಕಾರಿನಲ್ಲಿದ್ದ ಯುವಕರ ಪೈಕಿ ಒಬ್ಬನನ್ನು ಕರೆದ ಪೊಲೀಸ್ ಅಧಿಕಾರಿ, ತನ್ನ ಕಾಲುಗಳಿಗೆ ಮಸಾಜ್ ಮಾಡುವಂತೆ ಹೇಳಿದ್ದಾನೆ. ಯುವಕ ಈ ಬೇಡಿಕೆಯನ್ನು ಈಡೇರಿಸಿದ್ದು, ಸ್ಥಳದಲ್ಲಿದ್ದವರೊಬ್ಬರು ಈ ಘಟನೆಯನ್ನು ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಲೇ ಪೊಲೀಸರ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.