ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಕಬ್ಬಿಣದ ರಾಡೊಂದು ತಲೆಗೆ ಹೊಕ್ಕ ಕಾರಣ ಪುಣೆಯ 12 ವರ್ಷ ವಯಸ್ಸಿನ ಬಾಲಕ ಚೇತನ್ ಮಹೇಶ್ ಗಢಾವೆಯನ್ನು ನಗರದ ನೋಬೆಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತನ ಚಿಕಿತ್ಸಾ ವೆಚ್ಚವನ್ನು ಭರಿಸಲು ಆತನ ಕುಟುಂಬ ಅಶಕ್ತವಾಗಿತ್ತು.
ಈ ವೇಳೆ ಕುಟುಂಬದ ನೆರವಿಗೆ ಬಂದ ಎಂಎನ್‌ಎಸ್ ಕಾರ್ಪೋರೇಟರ್ ವಸಂತ್ ಮೋರೆ, ಖುದ್ದು ಆಸ್ಪತ್ರೆಗೆ ತೆರಳಿ ಮಗುವಿನ ಪರಿಸ್ಥಿತಿಯನ್ನು ವಿಚಾರಿಸಿ ತಿಳಿದುಕೊಂಡಿದ್ದಾರೆ.
ಬಳಿಕ ಫೇಸ್ಬುಕ್‌ನಲ್ಲಿರುವ ತಮ್ಮ ವಾಲ್‌ನಲ್ಲಿ ವಿನಂತಿಯೊಂದನ್ನು ಪೋಸ್ಟ್ ಮಾಡಿದ ಮೋರೆ, ಚೇತನ್‌ನ ನೆರವಿಗೆ ಬರಲು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಮನವಿಗೆ ಪ್ರತಿಕ್ರಿಯಿಸಿದ ನೆಟ್ಟಿಗರು ಚೇತನ್‌ರ ತಂದೆಯ ಖಾತೆಗೆ ತಮ್ಮ ಕೈಲಾದ ಮೊತ್ತವನ್ನು ಹಾಕಲು ಮುಂದೆ ಬಂದಿದ್ದಾರೆ. ಒಂದೇ ದಿನದಲ್ಲಿ 14 ಲಕ್ಷ ರೂ.ಗಳು ಬಾಲಕನ ಚಿಕಿತ್ಸೆಗೆ ನೆರವಾಗಲೆಂದು ಸಂಗ್ರಹವಾಗಿದೆ.