ಪುಣೆ: ಇಂಗ್ಲಿಷ್ ಟ್ಯೂಷನ್ ಶಿಕ್ಷಕಿಯ ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿದ ಆರೋಪದ ಮೇಲೆ 16 ವರ್ಷದ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಘಟನೆ ಬೆಳಕಿಗೆ ಬಂದ ಬಳಿಕ 56 ವರ್ಷದ ಶಿಕ್ಷಕಿ ಬಾಲಕನ ವಿರುದ್ಧ ಆಲಂಕಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯ ವಾಶ್ ರೂಂನಲ್ಲಿ ಮೊಬೈಲ್ ಫೋನ್ ಇಟ್ಟು ಬಾಲಕ ವಿಡಿಯೋ ರೆಕಾರ್ಡ್ ಮಾಡಿ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ಪೊಲೀಸ್ ಇನ್ಸ್ ಪೆಕ್ಟರ್ ಸಂಗೀತಾ ಪಾಟೀಲ್ ಅವರು ಆಕ್ಷೇಪಾರ್ಹ ವಿಡಿಯೋವನ್ನು ಹೊಂದಿರುವ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 66 ಇ ಅಡಿಯಲ್ಲಿ ಅಪ್ರಾಪ್ತ ವಯಸ್ಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಪ್ರಾಪ್ತ ವಯಸ್ಕನ ವಿರುದ್ಧ ಇನ್ನೂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ, ಅವನ ಬೋರ್ಡ್ ಪರೀಕ್ಷೆ ಬರೆಯುತ್ತಿದ್ದು, ಘಟನೆಯ ಬಗ್ಗೆ ಬಾಲಾಪರಾಧಿ ನ್ಯಾಯ ಮಂಡಳಿಗೆ ತಿಳಿಸಲಾಗಿದೆ ಎಂದು ಸಂಗೀತಾ ಪಾಟೀಲ್ ಹೇಳಿದ್ದಾರೆ.
ಕಳೆದ ಐದು ವರ್ಷಗಳಿಂದ ಶಿಕ್ಷಕಿ ಬಾಲಕನ ಮನೆಗೆ ಹೋಗಿ ಇಂಗ್ಲಿಷ್ ವಿಷಯದ ತರಬೇತಿ ನೀಡುತ್ತಿದ್ದರು. ಇತ್ತೀಚೆಗೆ ಶಿಕ್ಷಕಿ ವಾಶ್ ರೂಮ್ ಗೆ ಹೋದಾಗ, ರೆಕಾರ್ಡಿಂಗ್ ಮೋಡ್ ಆನ್ ಆಗಿರುವ ಸ್ಮಾರ್ಟ್ಫೋನ್ ಗಮನಿಸಿದ್ದಾರೆ. ಅನುಮಾನ ಬಂದು ಫೋನ್ ಅನ್ ಲಾಕ್ ಮಾಡಲು ಹುಡುಗನನ್ನು ಕೇಳಿಕೊಂಡಿದ್ದಾರೆ, ಫೋನ್ ಅನ್ ಲಾಕ್ ಮಾಡಿದಾಗ ಈಗಾಗಲೇ ರೆಕಾರ್ಡ್ ಆಗಿರುವ ವಿಡಿಯೋದಲ್ಲಿ ತನ್ನನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಲಾಗಿದೆ.