ಪುಣೆ: ನಾಗಪುರ ಆಡಳಿತ ಮಾರ್ಚ್ 15 ರಿಂದ 21 ರವರೆಗೆ ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಣೆ ಮಾಡಿದ ಒಂದು ದಿನದ ನಂತರ ಪುಣೆ ಜಿಲ್ಲಾಡಳಿತ ಹಲವು ನಿರ್ಬಂಧ ಘೋಷಿಸಿದೆ.
ಸಾರ್ವಜನಿಕ ಸಂಚಾರ ಜನಸಂದಣಿ, ರಾತ್ರಿ ವ್ಯಾಪಾರ ಸಂಸ್ಥೆಗಳ ಕಾರ್ಯಾಚರಣೆ ತಡೆಯಲು ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದು, ಇದನ್ನು ಅಧಿಕೃತವಾಗಿ ಲಾಕ್ಡೌನ್ ಎಂದು ಕರೆಯಲಾಗಿಲ್ಲ.
ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಪುಣೆ ಜಿಲ್ಲೆಯಲ್ಲಿ ಭಾರತದಲ್ಲಿಯೇ ಗರಿಷ್ಠ ಸಂಖ್ಯೆಯ ಸಕ್ರಿಯ ಕೊರೋನಾ ಪ್ರಕರಣಗಳು ಇವೆ. ಪುಣೆ ನಗರ ತಾಲೂಕುಗಳಲ್ಲದೆ, ಜಿಲ್ಲೆಯ 14 ತಾಲೂಕುಗಳಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.
ಮಾರ್ಚ್ 31 ರವರೆಗೆ ಜಿಲ್ಲೆಯ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ರಾತ್ರಿ 10 ಗಂಟೆಯವರೆಗೆ ತೆರೆಯಲು ಅವಕಾಶವಿದ್ದು, ಶೇಕಡ 50 ರಷ್ಟು ಗ್ರಾಹಕರಿಗೆ ಮಾತ್ರ ಸರ್ವಿಸ್ ನೀಡಬಹುದು. ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ ಇರುತ್ತದೆ. ಆದರೆ ಇದನ್ನು ನೈಟ್ ಕರ್ಫ್ಯೂ ಎಂದು ಕರೆಯದೆ ಪುಣೆ ಜಿಲ್ಲಾಡಳಿತ ನಾಗರಿಕರು ಅನಗತ್ಯವಾಗಿ ರಸ್ತೆಗಳಲ್ಲಿ ತಿರುಗಾಡಲು ಅನುಮತಿಸುವುದಿಲ್ಲ ಎಂದು ಹೇಳಿದೆ.
ಮದುವೆ ಸಮಾರಂಭ, ಅಂತ್ಯಕ್ರಿಯೆಗೆ ಅನುಮತಿ ನೀಡಿದ್ದು 50 ಮಂದಿಗೆ ಮಾತ್ರ ಅವಕಾಶ ಇರುತ್ತದೆ. ಪುಣೆ ನಗರಾಡಳಿತ ವಯಸ್ಕರಿಗೆ ಆದ್ಯತೆಯ ಮೇರೆಗೆ ಲಸಿಕೆ ಹಾಕಬೇಕೆಂದು ಕೇಂದ್ರಕ್ಕೆ ಮನವಿ ಮಾಡಲಿದೆ. ಪುಣೆಯಲ್ಲಿ ಸಕ್ರಿಯ ಪ್ರಕರಣಗಳ ಹೆಚ್ಚಳವಾಗುತ್ತಿರುವುದರಿಂದ ಮತ್ತು ದೈನಂದಿನ ಸೋಂಕುಗಳ ಸಂಖ್ಯೆ ಕೂಡ ಹೆಚ್ಚಿರುವುದರಿಂದ, ಪುಣೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲು ಅವಕಾಶ ಕೋರಿ ಅಧಿಕಾರಿಗಳು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲು ಯೋಜಿಸಿದ್ದಾರೆ.