ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಗದ್ಗುರು ಸಂತ ತುಕಾರಾಂ ಮಹಾರಾಜ್ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸರ್ಕಾರ ಅನುಮೋದನೆ ನೀಡಿದೆ.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೆಚ್ಚಿನ ಅನುಮೋದನೆಗಾಗಿ ಕೇಂದ್ರಕ್ಕೆ ಕಳುಹಿಸಲಾಗುವುದು.
ಪುಣೆ ವಿಮಾನ ನಿಲ್ದಾಣವನ್ನು ‘ಜಗದ್ಗುರು ಸಂತ ತುಕಾರಾಂ ಮಹಾರಾಜ್ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸರ್ಕಾರ ಸೋಮವಾರ ಅನುಮೋದನೆ ನೀಡಿದೆ. ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ, ಪುಣೆ ಮೂಲದ ಮುರಳೀಧರ್ ಮೊಹೋಲ್ ನೇತೃತ್ವದ ಮರುನಾಮಕರಣ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟದ ಒಪ್ಪಿಗೆ ದೊರೆತಿದೆ.
ಮರುನಾಮಕರಣ ಮಾಡುವ ನಿಟ್ಟಿನಲ್ಲಿ ಇಂದು ಮೊದಲ ಹೆಜ್ಜೆ ಇಡಲಾಗಿದೆ. ನಾನು ಸಲ್ಲಿಸಿದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಮುಂದಿನ ಪ್ರಕ್ರಿಯೆಗಾಗಿ ಈ ನಿರ್ಧಾರವನ್ನು ಈಗ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಮೆಹೋಲ್ ತಿಳಿಸಿದ್ದಾರೆ.
ಭಕ್ತಿ ಚಳವಳಿಯ ಪೂಜ್ಯ ಸಂತ ಮತ್ತು ಆಧ್ಯಾತ್ಮಿಕ ಕವಿ ಸಂತ ತುಕಾರಾಂ ಅವರು ಪುಣೆ ಜಿಲ್ಲೆಯವರು. ಅವರಿಗೆ ಗೌರವ ಸಲ್ಲಿಸಲು ಪುಣೆ ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಡಲಾಗುವುದು.
ಸಂತ ತುಕಾರಾಂ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಪುಣೆ ವಿಮಾನ ನಿಲ್ದಾಣದ ಸ್ಥಳವಾದ ಲೋಹಗಾಂವ್‌ನ ಮಹತ್ವವನ್ನು ಮೊಹೋಲ್ ತಿಳಿಸಿದ್ದಾರೆ. ಲೋಹಗಾಂವ್ ನಲ್ಲಿ ಸಂತ ತುಕಾರಾಂ ತಮ್ಮ ಬಾಲ್ಯ ಕಳೆದರು. ಅವರ ತಾಯಿಯ ಮನೆ ಇಲ್ಲಿದೆ. ಅವರ ಪರಂಪರೆಯೊಂದಿಗೆ ಸಂಪರ್ಕ ಹೊಂದಿದೆ. ಭಕ್ತಿ ಚಳವಳಿಯ ತತ್ವಗಳನ್ನು ಹರಡಲು ಮತ್ತು ಹೊಸ ಸಾಮಾಜಿಕ ಚಿಂತನೆಯನ್ನು ಉತ್ತೇಜಿಸಲು ಅವರ ಕೊಡುಗೆ ಅಪಾರ ಎಂದು ಮೆಹೋಲ್ ತಿಳಿಸಿದ್ದಾರೆ.