ರಕ್ತ ವರ್ಗಾವಣೆಯಿಲ್ಲದೆಯೇ (blood transfusion) ಪುಣೆ ಆಸ್ಪತ್ರೆಯೊಂದು ಯಕೃತ್ತಿನ ಕಸಿ ಶಸ್ತ್ರ ಚಿಕಿತ್ಸೆಯನ್ನ ಯಶಸ್ವಿಯಾಗಿ ಮಾಡಿದೆ. ಕೊನೆ ಹಂತದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ 52 ವರ್ಷದ ವ್ಯಕ್ತಿಗೆ ಯಕೃತ್ತಿನ ಕಸಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ವ್ಯಕ್ತಿಯ ಜೀವ ಉಳಿಯಲು ತನ್ನ ಯಕೃತ್ತಿನ ಒಂದು ಭಾಗವನ್ನು ದಾನ ಮಾಡಲು ಅವನ ಹೆಂಡತಿ ಒಪ್ಪಿಗೆ ನೀಡಿದ ನಂತರ ಪುಣೆಯ ಜುಪಿಟರ್ ಆಸ್ಪತ್ರೆ, ರಕ್ತ ವರ್ಗಾವಣೆಯ ಅಗತ್ಯವಿಲ್ಲದೇ ಯಕೃತ್ತಿನ ಕಸಿಯನ್ನು ಯಶಸ್ವಿಯಾಗಿ ನಡೆಸಿದೆ.
2023ರ ಡಿಸೆಂಬರ್ 4 ರಂದು 12 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದ್ದು ದಾನಿ ಮತ್ತು ರೋಗಿ ಇಬ್ಬರೂ ಆರೋಗ್ಯವಾಗಿದ್ದಾರೆ. ಯಕೃತ್ತು ಕಸಿ ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ಯಾವುದೇ ವೆಂಟಿಲೇಟರ್ ಬೆಂಬಲದ ಅಗತ್ಯವಿರಲಿಲ್ಲ ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ಜುಪಿಟರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಜುಪಿಟರ್ ಆಸ್ಪತ್ರೆಯ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸಕ ಡಾ ಅಭಿಷೇಕ್ ಯಾದವ್ ಮಾತನಾಡಿ, “ಯಕೃತ್ತು ಕಸಿ ಶಸ್ತ್ರ ಚಿಕಿತ್ಸೆ ಎಂದರೆ ಆರೋಗ್ಯವಂತ ವ್ಯಕ್ತಿಯ ಯಕೃತ್ತಿನ ಭಾಗವನ್ನು ತೆಗೆದು ಅದನ್ನು ಸ್ವೀಕರಿಸುವವರ ದೇಹಕ್ಕೆ ಕಸಿ ಮಾಡಲಾಗುತ್ತದೆ. ನಂತರ ಯಕೃತ್ತು ದಾನಿ ಮತ್ತು ಸ್ವೀಕರಿಸುವ ವ್ಯಕ್ತಿಯಲ್ಲಿ ಪುನರ್ ಬೆಳವಣಿಗೆಯಾಗುತ್ತದೆ. ಈ ವಿಧಾನವು ಅಂತಿಮ ಹಂತದ ಯಕೃತ್ತಿನ ಕಾಯಿಲೆಗಳ ಚಿಕಿತ್ಸೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಆದರೆ ಇಂತಹ ಶಸ್ತ್ರ ಚಿಕಿತ್ಸೆ ಹಂತದಲ್ಲಿ ದಾನಿ ಮತ್ತು ರೋಗಿಯ ದೇಹದಲ್ಲಿ ರಕ್ತನಷ್ಟದ ಸಾಧ್ಯತೆಯಿರುತ್ತದೆ. ಈ ವೇಳೆ ಅವರಿಗೆ ರಕ್ತ ಪೂರೈಕೆ/ ವರ್ಗಾವಣೆ ಮಾಡಬೇಕಾಗಿರುವುದರಿಂದ ಇದು ರಕ್ತ ವರ್ಗಾವಣೆಯ ಅಗತ್ಯತೆಗಳಂತಹ ಸವಾಲಿನ ಕೆಲಸವೂ ಆಗಿರುತ್ತದೆ ಎಂದಿದ್ದಾರೆ.
ಶಸ್ತ್ರ ಚಿಕಿತ್ಸೆಗೆ ಒಳಗಾದ ದಂಪತಿ ಕರಾಡ ಮೂಲದವರು. ವಿದ್ಯುತ್ ಸರಬರಾಜು ಸಂಸ್ಥೆಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುವ ವ್ಯಕ್ತಿಗೆ 2019 ರಲ್ಲಿ ಯಕೃತ್ತಿನ ಕಾಯಿಲೆ ಇರುವುದು ಪತ್ತೆಯಾಯಿತು. ಕಳೆದ ವರ್ಷ ನವೆಂಬರ್‌ನಲ್ಲಿ ಅವರಿಗೆ ಕಸಿ ಮಾಡಲು ಸಲಹೆ ನೀಡಲಾಯಿತು. ಅವರ ಜೀವ ಉಳಿಸಲು ತನ್ನ ಯಕೃತ್ತಿನ ಒಂದು ಭಾಗವನ್ನು ದಾನ ಮಾಡಲು ಆತನ ಪತ್ನಿ ತಕ್ಷಣ ಒಪ್ಪಿಕೊಂಡರು.
ಯಕೃತ್ತು ಕಸಿ ವೈದ್ಯ ಮತ್ತು ಹೆಪಟೊಲೊಜಿಸ್ಟ್ ಡಾ. ಪವನ್ ಹಂಚನಾಲೆ ಮಾತನಾಡಿ, “ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಯು ಅತ್ಯಂತ ಸಂಕೀರ್ಣವಾದ ವಿಧಾನವಾಗಿದೆ. ದುರ್ಬಲಗೊಂಡ ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವದ ಪ್ರವೃತ್ತಿಯನ್ನು ಅನುಭವಿಸುವ ಲಿವರ್ ಸಿರೋಸಿಸ್ ಹೊಂದಿರುವ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅನೇಕ ರಕ್ತ ವರ್ಗಾವಣೆಯ ಅಗತ್ಯವಿರುತ್ತದೆ” ಎಂದಿದ್ದಾರೆ.
ಯಕೃತ್ತು ಶಸ್ತ್ರ ಚಿಕಿತ್ಸೆಗೊಳಗಾದ ವ್ಯಕ್ತಿ ಮಾತನಾಡಿ, “ನನ್ನ ಯಕೃತ್ತು ಕೇವಲ 10-20% ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಯಕೃತ್ತು ಕಸಿಗೆ ಒಳಗಾಗಿದ್ದು ನನ್ನ ಹೆಂಡತಿಯ ನಿರ್ಧಾರ ನನಗೆ ಹೊಸ ಜೀವನವನ್ನು ನೀಡಿದೆ” ಎಂದು ಹೇಳಿದ್ದಾರೆ.