ಪುಣೆ: ಐಷಾರಾಮಿ ಪೋಶೆ ಕಾರ್ ಅಪಘಾತದಲ್ಲಿ ಭಾಗಿಯಾಗಿದ್ದ 17 ವರ್ಷದ ಬಾಲಕನ ರಕ್ತದ ಮಾದರಿ ಬದಲಿಸಿ ಅದರ ಜಾಗದಲ್ಲಿ ಮಹಿಳೆಯೊಬ್ಬರ ರಕ್ತದ ಮಾದರಿ ಇರಿಸಲಾಗಿತ್ತು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ರೀತಿ ರಕ್ತದ ಮಾದರಿಯನ್ನು ಬದಲಾಯಿಸಿ ಬಾಲಕ ಕಾರ್ ಚಾಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಮದ್ಯಪಾನ ಮಾಡಿರಲಿಲ್ಲ ಎಂದು ತೋರಿಸಲು ಪ್ರಯತ್ನಿಸಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂಧಿಸಿದ ಸಸ್ತೂನ್ ಆಸ್ಪತ್ರೆಯ ಇಬ್ಬರು ವೈದ್ಯರು ಮತ್ತು ಒಬ್ಬ ನೌಕರನ ಪೊಲೀಸ್ ಕಸ್ಟಡಿ ಅವಧಿಯನ್ನು ಸೆಷನ್ಸ್ ನ್ಯಾಯಾಲಯ ಜೂನ್ 5 ರ ವರೆಗೆ ವಿಸ್ತರಿಸಿ ಆದೇಶಿಸಿದೆ. ಅಪಘಾತ ಎಸಗಿದ ಬಾಲಕನ ರಕ್ತದ ಮಾದರಿಯ ಬದಲಿಗೆ ಇರಿಸಿದ್ದ ರಕ್ತದ ಮಾದರಿ ಯಾವ ಮಹಿಳೆಯದ್ದು ಎಂಬುದನ್ನು ಗುರುತಿಸಬೇಕಿದೆ ಎಂದು ನ್ಯಾಯಾಲಯಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ. ಆ ರಕ್ತದ ಮಾದರಿ ಬಾಲಕನ ತಾಯಿಗೆ ಸೇರಿದ್ದು ಎಂದು ಹೇಳಲಾಗಿದೆ.