ಪುಣೆ: ಮಹಾರಾಷ್ಟ್ರ ಮೂಲದ ಇಬ್ಬರು ಮಹಿಳೆಯರನ್ನು ಸೌದಿ ಅರೇಬಿಯಾದಲ್ಲಿ ತಲಾ 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ಬೆಂಗಳೂರು ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎಂ. ಫಯಾಜ್ ಯಾಹ್ಯಾ ಎಂಬಾತನನ್ನು ಗುರುವಾರ ಮುಂಬೈನಲ್ಲಿರುವ ಆತನ ಮನೆಯಿಂದ ಬಂಧಿಸಲಾಗಿದ್ದು, ಪುಣೆಗೆ ಕರೆತರಲಾಗಿದೆ. ಆರೋಪಿಯನ್ನು ಪುಣೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸೆಪ್ಟೆಂಬರ್ 26 ರವರೆಗೆ ಪೊಲೀಸರ ವಶಕ್ಕೆ ನೀಡಲಾಗಿದೆ.
ಫಯಾಜ್ ಮಹಾರಾಷ್ಟ್ರದ ಪುಣೆ ಮೂಲದ ಇಬ್ಬರು ಮಹಿಳೆಯರನ್ನು ಸೌದಿ ಅರೇಬಿಯಾದಲ್ಲಿ ತಲಾ 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ. ಅಲ್ಲಿಂದ ತಪ್ಪಿಸಿಕೊಂಡು ಬಂದ ಮಹಿಳೆಯರು ಆತನ ವಿರುದ್ಧ ದೂರು ದಾಖಲಿಸಿದ್ದು, ಕಾರ್ಯಾಚರಣೆ ನಡೆಸಿದ ಪುಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.