ಮದುವೆ ಸಮಾರಂಭದಲ್ಲಿ ಗುಲಾಬ್ ಜಾಮೂನು ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಅಡುಗೆ ಗುತ್ತಿಗೆದಾರನ ಮೇಲೆ ಹಲ್ಲೆ ನಡೆಸಿದ್ದು ಆತ ಗಂಭೀರವಾಗಿ ಗಾಯಗೊಂಡಿರೋ ಘಟನೆ ಪುಣೆಯಲ್ಲಿ ನಡೆದಿದೆ.
ಏಪ್ರಿಲ್ 23 ರಂದು ಪುಣೆಯ ಶೆವಾಲೆವಾಡಿ ಪ್ರದೇಶದಲ್ಲಿರುವ ರಾಜಯೋಗ್ ಮಂಗಲ್ ಕಾರ್ಯಾಲಯದಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ 1.30 ರ ಹೊತ್ತಿಗೆ ಮದುವೆ ಸಮಾರಂಭವು ಮುಕ್ತಾಯವಾಗಿತ್ತು. ಅಷ್ಟೊತ್ತಿಗೆ ಎಲ್ಲರಿಗೂ ಊಟ ಕೂಡ ಬಡಿಸಲಾಗಿತ್ತು. ಆದರೆ ಸಂಜೆ 6 ಗಂಟೆ ಸುಮಾರಿಗೆ ಮದುವೆಯಲ್ಲಿ ಪಾಲ್ಗೊಂಡಿದ್ದ ಕೆಲವು ಸಂಬಂಧಿಕರು ಅಡುಗೆ ಗುತ್ತಿಗೆದಾರ ದೀಪಾಂಶು ಗುಪ್ತಾ ಅವರ ಬಳಿ ಬಂದು ಮದುವೆಯಲ್ಲಿ ಉಳಿದ ಆಹಾರವನ್ನು ತೆಗೆದುಕೊಳ್ಳಬಹುದೇ ಎಂದು ಕೇಳಿದ್ದಾರೆ. ಇದಕ್ಕೆ ಗುತ್ತಿಗೆದಾರ ದೀಪಾಂಶು ಗುಪ್ತಾ ಒಪ್ಪಿದ ಬಳಿಕ ಉಳಿದ ಊಟವನ್ನು ಸಂಬಂಧಿಕರು ಪ್ಯಾಕ್ ಮಾಡಲು ಮುಂದಾದರು.
ಈ ವೇಳೆ ಓರ್ವ ವ್ಯಕ್ತಿ ಪ್ರತ್ಯೇಕವಾಗಿ ಇರಿಸಲಾಗಿದ್ದ ಗುಲಾಬ್ ಜಾಮೂನ್‌ಗಳನ್ನು ಪ್ಯಾಕ್ ಮಾಡುವುದನ್ನು ಗುಪ್ತಾ ಗಮನಿಸಿದರು. ಇದಕ್ಕೆ ಗುಪ್ತಾ ಆಕ್ಷೇಪ ವ್ಯಕ್ತಪಡಿಸಿ, ಅವುಗಳನ್ನು ಮರುದಿನ ಮತ್ತೊಂದು ಸಮಾರಂಭಕ್ಕೆ ತಯಾರಿಸಿರುವುದು ಎಂದು ಹೇಳಿದರು. ಇದು ವಾಗ್ವಾದಕ್ಕೆ ಕಾರಣವಾಗಿ ಸಂಬಂಧಿಕರ ಗುಂಪು ಅವರ ಮೇಲೆ ಹಲ್ಲೆ ನಡೆಸಿತು.
ದಾಳಿಕೋರರಲ್ಲಿ ಒಬ್ಬರು ಕರಿದ ಪದಾರ್ಥ ತೆಗೆಯುವ ಸೌಟಿನಿಂದ ಗುಪ್ತಾ ಅವರ ತಲೆಗೆ ಹೊಡೆದರು. ಇದರಿಂದ ಅವರಿಗೆ ತೀವ್ರ ರಕ್ತಸ್ರಾವವಾದ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುತ್ತಿಗೆದಾರ ದೀಪಾಂಶು ಗುಪ್ತಾ ಅವರ ಸ್ಥಿತಿ ಗಂಭೀರವಾಗಿದೆ.
ದಾಳಿಯ ನಂತರ ನಾಲ್ವರು ಶಂಕಿತರು ಮದುವೆ ಸಮಾರಂಭದ ಹಾಲ್‌ನಿಂದ ಪರಾರಿಯಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.