
ಕಾರವಾರ: ಕಾರವಾರದ ಹಣಕೋಟಾದಲ್ಲಿ ಪುಣೆ ಉದ್ಯಮಿ ವಿನಾಯಕ ನಾಯ್ಕ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ವಿನಾಯಕ ನಾಯ್ಕ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗೋವಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿ ಉದ್ಯಮಿ ಗುರುಪ್ರಸಾದ್ ರಾಣೆ ಗೋವಾದ ಮಾಂಡವಿ ನದಿಗೆ ಹಾರಿ ಸಾವಿಗೆ ಶರಣಾಗಿದ್ದಾನೆ. ಕೌಟುಂಬಿಕ ದ್ವೆಷಕ್ಕೆ ವಿನಾಯಕ ನಾಯ್ಕ್ ಕೊಲೆ ನಡೆದಿದೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಬಿಹಾರ ಮೂಲದ ಅಜ್ಮಲ್ ಜಾಬಿರ್, ಮಾಸೂಮ್ ಮಂಜೂರ್, ಅಸ್ಸಾಂ ನ ಲಕ್ಷ ಜ್ಯೋತಿನಾಥ್ ಎಂದು ಗುರುತಿಸಲಾಗಿದೆ.
ಪುಣೆಯ ಉದ್ಯಮಿ ವಿನಾಯಕ ನಾಯ್ಕ್ ಹಾಗೂ ಗೋವಾ ಉದ್ಯಮಿ ಗುರುಪ್ರಸಾದ್ ರಾಣೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕಾರವಾರದವರಾಗಿದ್ದು, ಇಬ್ಬರೂ ಸಂಬಂಧಿಕರಾಗಿದ್ದಾರೆ. ಆದರೆ ಕೌಟುಂಬಿಕ ಕಲಹದಿಂದಾಗಿ ಎರಡೂ ಕುಟುಂಬಗಳಲ್ಲಿಯೂ ದಾಂಪತ್ಯ ಕಲಹಕ್ಕೂ ಕಾರಣವಾಗಿತ್ತು. ವಿನಾಯಕ್ ನಾಯ್ಕ್ ಪತ್ನಿ ವಿಚ್ಛೇದನ ನೀಡುವ ಹಂತಕ್ಕೂ ಹೋಗಿದ್ದರು. ಆದರೆ ಸಂಬಂಧಿಗಳ ಮಧ್ಯಸ್ಥಿಕೆಯಿಂದಾಗಿ ಹೊಂದಾಣಿಕೆಯಾಗಿತ್ತು. ಆದರೆ ಈ ಕೌಟುಂಬಿಕ ಜಗಳ ಗೋವಾ ಉದ್ಯಮಿ ಗುರುಪ್ರಸಾದ್ ರಾಣೆ ಬದುಕನ್ನೇ ಹಾಳುಮಾಡಿತ್ತು. ಹೀಗಾಗಿ ಗುರುಪ್ರಸಾದ್ ತನ್ನ ಸಹಚರರ ಜೊತೆ ಸೇರಿ ವಿನಯಕ ನಾಯ್ಕ್ ಹತ್ಯೆಗೆ ಕಳೆದ 6 ತಿಂಗಳಿಂದ ಸಂಚು ರೂಪಿಸಿದ್ದ.
ತಾಯಿಯ ತಿಥಿ ಹಾಗೂ ಊರದೇವರ ಉತ್ಸವಕ್ಕೆಂದು ವಿನಾಯಕ್ ನಾಯ್ಕ್ ಪತ್ನಿ ಜೊತೆ ಕಾರವಾರಕ್ಕೆ ಬಂದಿದ್ದರು. ಸೆ.22ರಂದು ಪುಣೆಗೆ ವಾಪಾಸ್ ಆಗಲು ಸಿದ್ಧರಾಗುತ್ತಿದ್ದರು. ಈ ವೇಳೆ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಮುಸುಕುಧಾರಿಗಳ ಗುಂಪು ಮನೆಗೆ ನುಗ್ಗಿ ವಿನಾಯಕ ನಾಯ್ಕ್ ಅವರನ್ನು ಬರ್ಬವಾಗಿ ಹತ್ಯೆ ಮಾಡಿತ್ತು. ಅವರ ಪತ್ನಿ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು, ಆದರೆ ಅವರು ಬಚಾವ್ ಆಗಿದ್ದರು.