ಪುಣೆಯ ಆಟೋ ರಿಕ್ಷಾದಲ್ಲಿ ಜೀವಂತ ಅಕ್ವೇರಿಯಂ ಅಳವಡಿಸಿದ್ದು, ಪ್ರಯಾಣಿಕರು ಬೆರಗಾಗಿದ್ದಾರೆ. ಅನೇಕರು ಇದರ ವಿಶಿಷ್ಟತೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಮೀನುಗಳ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಚೈತನ್ಯಭರಿತ ಸಂಸ್ಕೃತಿ ಮತ್ತು ವಿಚಿತ್ರ ಆಶ್ಚರ್ಯಗಳಿಂದ ಕೂಡಿದ ನಗರದಲ್ಲಿ, ಪುಣೆ ತನ್ನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿದೆ ಎಂದು ಸಾಕ್ಷಿ ಎಂಬ ಮಹಿಳೆ ಈ ಆಹ್ಲಾದಕರ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದು ಕೇವಲ ಸವಾರಿಯನ್ನು ಮಾತ್ರವಲ್ಲದೆ ಒಂದು ಹೊಸ ಅನುಭವವನ್ನು ನೀಡುವ ಆಟೋ ರಿಕ್ಷಾವನ್ನು ತೋರಿಸುತ್ತದೆ.
ಸಾಕ್ಷಿ ಸಂಚರಿಸಲು ಆಟೋವನ್ನು ಹತ್ತಿದಾಗ, ಆಟೋದ ವಿಶಿಷ್ಟವಾದ ಸೆಟಪ್‌ನಿಂದ ಮಂತ್ರಮುಗ್ಧರಾಗಿದ್ದಾರೆ. ತನ್ನ ಉತ್ಸಾಹವನ್ನು ತಡೆಯಲು ಸಾಧ್ಯವಾಗದೆ, ಚಾಲಕನ ಸೀಟಿನ ಹಿಂದೆ ಅಳವಡಿಸಲಾಗಿರುವ ಅಕ್ವೇರಿಯಂ ಹೈಲೈಟ್ ಮಾಡುವ ವೀಡಿಯೊವನ್ನು ರೆಕಾರ್ಡ್ ಮಾಡಿದ್ದು, ವರ್ಣರಂಜಿತ ದೀಪಗಳಿಂದ ಬೆಳಗಿಸಲ್ಪಟ್ಟ ಇದು ಸಮುದ್ರದ ವಾತಾವರಣವನ್ನು ಅನುಕರಿಸುತ್ತದೆ. ಆಕೆ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.
ನೆಟ್ಟಿಗರು ಫಿದಾ
ವೀಡಿಯೊವು ತ್ವರಿತವಾಗಿ ವೈರಲ್ ಆಗಿದ್ದು, ಎರಡು ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿ ನೆಟ್ಟಿಗರಲ್ಲಿ ಕುತೂಹಲವನ್ನು ಕೆರಳಿಸಿದೆ. ಅನೇಕರು ಇದಕ್ಕೆ ಚಾಲಕ ಹೆಚ್ಚುವರಿ ಶುಲ್ಕ ವಿಧಿಸುತ್ತಾನೆಯೇ ಎಂದು ಕೇಳಿದ್ದಾರೆ. ಮತ್ತೊಬ್ಬರು ಉತ್ಸಾಹದಿಂದ, “ಈ ಸವಾರಿಗೆ ನಾನು ಮೂರು ಪಟ್ಟು ಹಣವನ್ನು ಪಾವತಿಸುತ್ತೇನೆ!” ಎಂದು ಕಾಮೆಂಟ್ ಮಾಡಿದ್ದಾರೆ.
ಆದಾಗ್ಯೂ, ಈ ದೃಶ್ಯವು ಮೀನುಗಳ ಯೋಗಕ್ಷೇಮದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಕೆಲವು ಬಳಕೆದಾರರು ಈ ಕಲ್ಪನೆಯನ್ನು ಟೀಕಿಸಿದ್ದು, ಜಲಚರ ಜೀವಿಗಳಿಗೆ ಇದು ಒತ್ತಡ ಮತ್ತು ಅಸುರಕ್ಷಿತವೆಂದು ಬಣ್ಣಿಸಿದ್ದಾರೆ.