ಬೆಂಗಳೂರು: ಬೇಸಿಗೆಯಲ್ಲೂ ರೈತರಿಗೆ 7 ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಬರಗಾಲ ಇರುವುದರಿಂದ ವಿದ್ಯುತ್ ಕೊರತೆ ಆಗಲಿದೆ ಎನ್ನುವ ಆತಂಕ ರೈತರಿಗೆ ಬೇಡ, ಪ್ರಸಕ್ತ ಸಾಲಿನಲ್ಲಿ ನೀರಾವರಿ ಪಂಪ್ ಸೆಟ್ ಗಳಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ತೀವ್ರ ಏರಿಕೆ ಕಾಣಲಿದ್ದು, ಇದನ್ನು ಸರಿದೂಗಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುವುದು. ಬೇಸಿಗೆಯಲ್ಲಿಯೂ ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುವುದು. ಕುಸುಮ್ ಯೋಜನೆ ಜಾರಿಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೃಷಿ ಕೊಳವೆ ಬಾವಿಗಳಿಗೆ ರೈತರು ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಬೇಕೆಂಬ ಸರ್ಕಾರದ ಆದೇಶ ಹಿಂಪಡೆಯುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 22 ಕ್ಕಿಂತ ಮೊದಲು ಅಕ್ರಮ ಸಕ್ರಮ ಮತ್ತು ಶೀಘ್ರ ವಿದ್ಯುತ್ ಯೋಜನೆ ಅಡಿ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 4.30 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, ಇವುಗಳ ವಿಲೇವಾರಿಗೆ ಸುಮಾರು 6000 ಕೋಟಿ ರೂ ಬೇಕಾಗುತ್ತದೆ. ನೀರಾವರಿ ಪಂಪ್ಸೆಟ್ ಗಳಿಗೆ 4500 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, ಮುಖ್ಯಮಂತ್ರಿಗಳ ಸೂಚನೆಯಂತೆ ನೀರಾವರಿ ಪಂಪ್ಸೆಟ್ ಗಳಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಯ 2.64 ಲಕ್ಷ ಫಲಾನುಭವಿಗಳ ಬಾಕಿ ಮೊತ್ತ 389.66 ಕೋಟಿ ರೂ. ವಿದ್ಯುತ್ ಶುಲ್ಕ ಮನ್ನಾ ಮಾಡಲಾಗಿದ್ದು, ಅವರನ್ನು ಉಚಿತ ವಿದ್ಯುತ್ ಗೃಹಜ್ಯೋತಿ ಯೋಜನೆಗೆ ಸೇರ್ಪಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.