ಬೆಳಗಾವಿ(ಸುವರ್ಣಸೌಧ): ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಪ್ರಸ್ತುತ ರೈತರ ಕೃಷಿ ಪಂಪ್ ಸೆಟ್ ಗಳಿಗೆ ದಿನನಿತ್ಯ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನಪರಿಷತ್‌ನಲ್ಲಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಇಂಧನ ಸಚಿವರ ಪರವಾಗಿ ಅವರು ಉತ್ತರಿಸಿದರು.
ರೈತರ ಪಂಪ್ ಸೆಟ್ ಗಳಿಗೆ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿನ ಬೇಡಿಕೆಗಳ ಹಿನ್ನೆಲೆಯಲ್ಲಿ ಭತ್ತ ಮತ್ತು ಕಬ್ಬು ಬೆಳೆಗಳ ಕಟಾವು ಪೂರ್ವ ಅವಧಿಯಲ್ಲಿ 7 ಗಂಟೆಗಳಿಗೂ ಹೆಚ್ಚಿನ ಅವಧಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಸ್ಥಳೀಯ ಅವಶ್ಯಕತೆಗೆ ತಕ್ಕಂತೆ ಹಗಲಿನಲ್ಲಿ 4 ಗಂಟೆಗಳು ಹಾಗೂ ರಾತ್ರಿ ವೇಳೆ 3 ಗಂಟೆಗಳು ಸೇರಿ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ವರ್ಷ ಬರಗಾಲವಾಗಿರುವುದರಿಂದ ಕೃಷಿ ಪಂಪ್ ಸೆಟ್ ಗಳ ವಿದ್ಯುತ್ ಬಳಕೆ ಪ್ರಮಾಣ ದ್ವಿಗುಣವಾಗಿರುವುದರಿಂದ ಲಭ್ಯ ಸಂಪನ್ಮೂಲಗಳಿAದ ವಿದ್ಯುತ್ ಪಡೆದು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕೆಲವು ಸಮಯಗಳಲ್ಲಿ ತಾಂತ್ರಿಕ ಕಾರಣಗಳಿಂದ ವಿದ್ಯುತ್ ಲಭ್ಯತೆ/ಉತ್ಪಾದನೆ ಕುಂಠಿತಗೊಂಡು ಸೀಮಿತ ಪ್ರಮಾಣದಲ್ಲಿ ವಿದ್ಯುತ್ ಸರಬರಾಜು ಮಾಡಿರುವುದನ್ನು ಇದೇ ಸಂದರ್ಭದಲ್ಲಿ ತಿಳಿಸಿದರು.