ಬೆಂಗಳೂರು: ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಕೊರತೆ ನೀಗಿಸಲು ರಾಜ್ಯದಾದ್ಯಂತ 379 ವಿದ್ಯುತ್ ಉಪ ಕೇಂದ್ರಗಳ ಬಳಿ 10,000 ಎಕರೆ ಸರ್ಕಾರಿ ಜಮೀನಿನಲ್ಲಿ 2500 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದಿಸಲು ಇಂಧನ ಇಲಾಖೆ ಯೋಜನೆ ರೂಪಿಸಿದೆ. ವಿದ್ಯುತ್ ಅನ್ನು ಸೌರ ಘಟಕದ ಸಮೀಪ ಇರುವ ರೈತರ ಕೃಷಿ ಪಂಪ್ಸೆಟ್ ಗಳಿಗೆ ಪೂರೈಕೆ ಮಾಡಲಾಗುವುದು.
ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಇಲಾಖೆ ಪಿಎಂ ಕುಸುಮ್ ಸಿ ಯೋಜನೆ ಅಡಿ ಕೃಷಿ ಪಂಪ್ ಸೆಟ್ ಗಳಿಗೆ ಗ್ರಿಡ್ ಆಧಾರಿತ ಸೌರ ವಿದ್ಯುತ್ ಪೂರೈಸಲು ಯೋಜನೆ ರೂಪಿಸಲಾಗಿದೆ. ಸೌರ ವಿದ್ಯುತ್ ಉತ್ಪಾದಿಸಿ ವಿದ್ಯುತ್ ಉಪ ಕೇಂದ್ರದ ಮೂಲಕ ಕೃಷಿ ಪಂಪ್ಸೆಟ್ ಗಳಿಗೆ ಪೂರೈಕೆ ಮಾಡಲಾಗುತ್ತದೆ.
ಇದಕ್ಕಾಗಿ ಕೃಷಿ ಪಂಪ್ ಸೆಟ್ ಗಳ ಬಳಕೆ ಹೆಚ್ಚಾಗಿರುವ ಎಲ್ಲ ಜಿಲ್ಲೆಗಳ 379 ವಿದ್ಯುತ್ ಉಪ ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಕೇಂದ್ರಗಳಿಗೆ ಸಮೀಪದಲ್ಲಿರುವ 10,000 ಎಕರೆ ಸರ್ಕಾರಿ ಜಮೀನು ಗುರುತಿಸಿದ್ದು, ಈ ಜಮೀನನ್ನು ಇಂಧನ ಇಲಾಖೆ ಗುತ್ತಿಗೆ ಪಡೆದು ಪಿಪಿಪಿ ಮಾದರಿಯಲ್ಲಿ ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ನಿರ್ಮಿಸಲಿದೆ. ಹೀಗೆ ಉತ್ಪಾದಿಸಲಾದ ಸೌರ ವಿದ್ಯುತ್ ಅನ್ನು ಕೃಷಿ ಪಂಪ್ಸೆಟ್ ಗಳಿಗೆ ಪೂರೈಸುವ ಮೂಲಕ ವಿದ್ಯುತ್ ಕೊರತೆ ನಿವಾರಿಸುವ ಜೊತೆಗೆ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಕೆಗೆ ಆಗುತ್ತಿರುವ ಆರ್ಥಿಕ ಹೊರೆ ಕಡಿಮೆ ಮಾಡಲು ಚಿಂತನೆ ನಡೆದಿದೆ.