
ಬೆಂಗಳೂರು: ತೋಟದ ಮನೆಗಳಿಗೆ ರಾತ್ರಿ ವೇಳೆ ನೀಡುತ್ತಿದ್ದ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ನಿಲ್ಲಿಸಿದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ನೀರಾವರಿ ಫೀಡರ್ ಗಳ ಮೂಲಕ ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಲು ಬೆಸ್ಕಾಂ ಮುಂದಾಗಿದೆ.
ಪ್ರತಿದಿನ ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆ ಮಾಡಲಿದ್ದು, ಸಿಂಗಲ್ ಫೇಸ್ ಗೆ ಪಂಪ್ಸೆಟ್ ಬಳಕೆ ಮಾಡದಂತೆ ರೈತರಿಗೆ ಮನವಿ ಮಾಡಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿನ ತೋಟದ ಮನೆಗಳಿಗೆ ಕೃಷಿ ಪಂಪ್ಸೆಟ್ ಗಳಿಗೆ ಅನುಕೂಲವಾಗುವಂತೆ ನಿಗದಿತ ಅವಧಿಯಷ್ಟು ತ್ರೀ ಫೇಸ್ ವಿದ್ಯುತ್ ಪೂರೈಸಲಾಗುತ್ತಿತ್ತು. ರಾತ್ರಿಯ ವೇಳೆ ತೋಟದ ಮನೆಗಳಿಗೆ ತೊಂದರೆಯಾಗದಂತೆ ನಿರಂತರವಾಗಿ ನೀರಾವರಿ ಫೀಡರ್ ಮೂಲಕವೇ ಸಿಂಗಲ್ ಫೇಸ್ ವಿದ್ಯುತ್ ಪೂರೈಸಲಾಗುತ್ತಿತ್ತು. ಸಿಂಗಲ್ ಫೇಸ್ ವಿದ್ಯುತ್ ಗೆ ಕಂಡನ್ಸರ್ ಬಳಸಿ ಪಂಪ್ ಸೆಟ್ ಆನ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು.
ಪರೀಕ್ಷೆ ಸಮಯ ಹತ್ತಿರವಾಗಿರುವುದರಿಂದ ರೈತರ ಮಕ್ಕಳಿಗೆ ಅನುಕೂಲವಾಗುವಂತೆ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ರೈತರ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆ 4 ಗಂಟೆ ರಾತ್ರಿ ವೇಳೆ 3 ಗಂಟೆ ತ್ರೀ ಫೇಸ್ ವಿದ್ಯುತ್ ನೀಡಲಾಗುವುದು. ಗ್ರಾಮಾಂತರ ಪ್ರದೇಶದ ಮನೆಗಳಿಗೆ ನಿರಂತರ ಜ್ಯೋತಿ ಫೀಡರ್ ಮೂಲಕ ದಿನದ 24 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುವುದು. ನೀರಾವರಿ ಫೀಡರ್ ಗಳ ಮೂಲಕ ತೋಟದ ಮನೆಗಳಿಗೆ ಗೃಹೋಪಯೋಗಿ ಬಳಕೆಗೆ ಮಾತ್ರ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಸಿಂಗಲ್ ಫೇಸ್ ವಿದ್ಯುತ್ ಅನ್ನು ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೆ ಫೀಡರ್ ಗಳಿಗೆ ಓಪನ್ ಡೆಲ್ಟಾ ಮೂಲಕ ನೀಡಲಾಗುವುದು.