ಧಾರವಾಡ: ಪೋಲಿಯೋ ನಿರ್ಮೂಲನೆಯಲ್ಲಿ ಭಾರತ ದೇಶವು ಗಣನೀಯ ಪ್ರಗತಿ ಸಾಧಿಸಿದೆ. ದೇಶವು 2014 ರಲ್ಲಿಯೇ ಪೊಲಿಯೋ ಮುಕ್ತ ರಾಷ್ಟ್ರವೆಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಘೋಷಿಸಲ್ಪಟ್ಟಿದೆ. ನೆರೆಯ ಕೆಲವು ರಾಷ್ಟ್ರಗಳಲ್ಲಿ ಪೋಲಿಯೋ ವೈರಸ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಸಾರ್ವತ್ರಿಕ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ರಾಷ್ಟ್ರೀಯ ಕಾರ್ಯಕ್ರಮವಾಗಿ ಮುಂದುವರಿಸಲಾಗುತ್ತಿದೆ.
ಜನವರಿ 23 ರಿಂದ 26 ರ ವರೆಗೆ ಐದು ವರ್ಷದೊಳಗಿನ 2,13,014 ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವುದು. ಜಿಲ್ಲೆಯ ಎಲ್ಲ ಇಲಾಖೆಗಳು, ಸಂಘಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ ಮಾಡಿದ್ದಾರೆ.
ಪಲ್ಸ್ ಪೋಲಿಯೋ 2022 ರ ಜಿಲ್ಲಾಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಜಿಲ್ಲೆಯ 901 ಲಸಿಕಾ ಕೇಂದ್ರಗಳಲ್ಲಿ ನಡೆಸಲಾಗುವುದು. 100 ಸಂಚಾರಿ ತಂಡಗಳು, 57 ಮೊಬೈಲ್ ತಂಡಗಳನ್ನು ರಚಿಸಲಾಗಿದೆ. 3874 ಲಸಿಕಾ ಕಾರ್ಯಕರ್ತರು, 201 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಜಿಲ್ಲೆಯ 412985 ಮನೆಗಳಿಗೆ ತೆರಳಿ ಲಸಿಕೆ ಹಾಕಲಾಗುವುದು. ಮೊದಲ ದಿನ ಅಂದರೆ ಜ.23 ರಂದು ಬೂತ್‍ಗಳಲ್ಲಿ ಲಸಿಕೆ ಹಾಕಲಾಗುವುದು. ನಂತರದ ದಿನಗಳಂದು ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡಿ ಲಸಿಕೆ ಹಾಕಬೇಕು. ಎಲ್ಲ ಮನೆಗಳ ಮೇಲೆ ಪಿ ಎಂದು ಗುರುತು ಹಾಕಬೇಕು ಎಂದು ಸೂಚಿಸಿದರು.