ದ್ವಿತೀಯ ಪಿಯುಸಿ ಪರೀಕ್ಷಾ ಅವಧಿಯನ್ನು 15 ನಿಮಿಷ ಕಡಿತಗೊಳಿಸಲಾಗಿದೆ. ಇನ್ನು ಮುಂದೆ 2 ಗಂಟೆ 45 ನಿಮಿಷ ಪರೀಕ್ಷೆ ನಡೆಯಲಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಕುರಿತು ಸುತ್ತೋಲೆ ಹೊರಡಿಸಿದೆ. ಇದುವರೆಗೆ, 3 ಗಂಟೆ ಅವಧಿಯಲ್ಲಿ ಪರೀಕ್ಷೆ ಇರುತ್ತಿತ್ತು. ಪರೀಕ್ಷೆಗೆ ಉತ್ತರ ಬರೆಯುವ ಅವಧಿಯನ್ನು 2 ಗಂಟೆ 45 ನಿಮಿಷಕ್ಕೆ ನಿಗದಿ ಮಾಡಿದ್ದರೂ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಓದಿಕೊಳ್ಳಲು ಹೆಚ್ಚುವರಿಯಾಗಿ 15 ನಿಮಿಷ ನೀಡಲಾಗುವುದು.
ಈ ಹಿಂದೆ 3 ಗಂಟೆ ಇದ್ದಾಗ ಪ್ರಶ್ನೆಗಳ ಓದಿಗೆ ಹೆಚ್ಚುವರಿಯಾಗಿ 15 ನಿಮಿಷ ನೀಡಲಾಗುತ್ತಿತ್ತು. ಹಿಂದೆ ಪರೀಕ್ಷೆಗಳಲ್ಲಿ ಪ್ರತಿ ವಿಷಯದ ಲಿಖಿತ ಪರೀಕ್ಷೆಯನ್ನು 100 ಅಂಕಗಳಿಗೆ ನಡೆಸಲಾಗುತ್ತದೆ. 2023-24ನೇ ಸಾಲಿನಿಂದ ಪ್ರಾಯೋಗಿಕ ಪರೀಕ್ಷೆ, ಆಂತರಿಕ ಮೌಲ್ಯಮಾಪನಕ್ಕೆ ಪ್ರತ್ಯೇಕ ಅಂಕ ನಿಗದಿ ಮಾಡಿದ್ದ ಕಾರಣ ಲಿಖಿತ ಪರೀಕ್ಷೆ ಅಂಕಗಳನ್ನು ಕಡಿತ ಮಾಡಲಾಗಿತ್ತು. ಆದರೆ ಪರೀಕ್ಷಾ ಅವಧಿ ಕಡಿತ ಮಾಡಿರಲಿಲ್ಲ.
ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಕ ವಿಜ್ಞಾನ ಸೇರಿ ಕೆಲವು ಪ್ರಾಯೋಗಿಕ ಪರೀಕ್ಷೆಗಳಿಗೆ 70 ಅಂಕಗಳಿಗೆ ಉತ್ತರಿಸಬೇಕು. ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ 80 ಅಂಕಗಳಿಗೆ ಉತ್ತರಿಸಬೇಕು.
80 ಅಂಕಗಳಿಗೆ ಉತ್ತರಿಸಬೇಕಾದ ವಿಷಯಗಳ ಪ್ರಶ್ನೆ ಪತ್ರಿಕೆಗಳು ಒಟ್ಟು 120 ಅಂಕಗಳ ಪ್ರಶ್ನೆಗಳು ಒಳಗೊಂಡಿದ್ದು, ಅವುಗಳಲ್ಲಿ 80 ಅಂಕಗಳಿಗಷ್ಟೇ ಉತ್ತರ ನೀಡಬೇಕು. 70 ಅಂಕಗಳಿಗೆ ಉತ್ತರಿಸುವ ವಿಷಯಗಳ ಪ್ರಶ್ನೆ ಪತ್ರಿಕೆ 105 ಅಂಕಗಳ ಪ್ರಶ್ನೆಗಳು ಒಳಗೊಂಡಿದ್ದು, 70 ಅಂಕಗಳಿಗೆ ಮಾತ್ರ ಉತ್ತರಿಸಬೇಕು.
ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವಾಗ ಪಠ್ಯಕ್ಕೆ ಹೊರತಾದ ಪ್ರಶ್ನೆಗಳಿಗೆ ಅವಕಾಶ ನೀಡಬಾರದು. ಪಠ್ಯ ಕ್ರಮದಲ್ಲಿ ಇರುವ ವಿಷಯಗಳ ಮೇಲೆ ಪ್ರಶ್ನೆಗಳನ್ನು ಸಿದ್ಧಪಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಲಾಗಿದೆ.