ಬೆಂಗಳೂರು: ಪಿಯುಸಿ ಪರೀಕ್ಷೆಗಳು ಏ. 21 ರ ನಾಳೆಯಿಂದ ಮೇ 18ರ ವರೆಗೆ ರಾಜ್ಯಾದ್ಯಂತ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿರುವ ಫೋಟೋ ಕಾಪಿಯರ್ (ಜೆರಾಕ್ಸ್) ಮತ್ತು ಸೈಬರ್ ಕೇಂದ್ರಗಳನ್ನು ಮುಚ್ಚುವಂತೆ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಪರೀಕ್ಷೆಗಳು ಸುಗಮವಾಗಿ ನಡೆಯಲು ಸರ್ಕಾರ ಹಾಗೂ ಇಲಾಖೆಗಳು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿವೆ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಪರೀಕ್ಷಾ ದಿನಗಳಲ್ಲಿ ಕಾಲೇಜುಗಳಿಂದ 200 ಮೀ. ವ್ಯಾಪ್ತಿಯಲ್ಲಿರುವ ಎಲ್ಲ ಫೋಟೋ ಕಾಪಿಯರ್ ಮತ್ತು ಸೈಬರ್ ಕೇಂದ್ರಗಳನ್ನು ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರ ತನಕ ಮುಚ್ಚಬೇಕು. ಪರೀಕ್ಷಾ ಕೇಂದ್ರಗಳ ಸಮೀಪ 4 ಅಥವಾ ಹೆಚ್ಚು ಜನರು ಗುಂಪುಗೂಡುವುದನ್ನೂ ನಿರ್ಬಂಧಿಸಲಾಗಿದೆ. ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಂತ್ ತಿಳಿಸಿದ್ದಾರೆ.