ಬೆಂಗಳೂರು: ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ. ಡಿಸೆಂಬರ್ 9 ರಿಂದ ಪರೀಕ್ಷೆಗಳು ನಡೆಯಲಿವೆ. ಈ ಮೊದಲು ನವೆಂಬರ್ 29 ರಿಂದ ಡಿಸೆಂಬರ್ 10 ರವರೆಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ವಿದ್ಯಾರ್ಥಿಗಳು, ಉಪನ್ಯಾಸಕರಿಂದ ವಿರೋಧ, ಆಕ್ಷೇಪ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಪರೀಕ್ಷೆಯನ್ನು ಮುಂದೂಡಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.
ಪಬ್ಲಿಕ್ ಪರೀಕ್ಷೆ ಮಾದರಿಯಲ್ಲಿ ಅರ್ಧವಾರ್ಷಿಕ ಪರೀಕ್ಷೆ ನಡೆಯಲಿದೆ. ಏಕಕಾಲಕ್ಕೆ ಪರೀಕ್ಷೆ ನಡೆಸುವ ನಿರ್ಧಾರದಲ್ಲಿ ಬದಲಾವಣೆ ಮಾಡಿಲ್ಲ. ಆಯಾ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲು ತಿಳಿಸಲಾಗಿದ್ದು, ದ್ವಿತೀಯ ಪಿಯುಸಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಆಯಾ ಜಿಲ್ಲಾ ಉಪನಿರ್ದೇಶಕರಿಗೆ ನೀಡಲಿದೆ. ಉಪ ನಿರ್ದೇಶಕರು ಪ್ರಶ್ನೆ ಪತ್ರಿಕೆ ಮುದ್ರಿಸಿ ಕಾಲೇಜ್ ಗಳಿಗೆ ತಲುಪಿಸಲಿದ್ದಾರೆ. ಕಾಲೇಜ್ ಗಳಲ್ಲಿ ಮೌಲ್ಯಮಾಪನ ನಡೆಯಲಿದೆ.