
ಬೆಂಗಳೂರು: ಪ್ರಥಮ ಪಿಯುಸಿ ಪರೀಕ್ಷೆಯನ್ನು ಮೌಲ್ಯಮಾಪನ ಎಂದು ತಪ್ಪಾಗಿ ಭಾವಿಸಬಾರದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಪ್ರಥಮ ಪಿಯುಸಿ ಪರೀಕ್ಷೆ ನಡೆಸುತ್ತಿರುವ ಕುರಿತು ಸ್ಪಷ್ಟನೆ ನೀಡಿದ ಅವರು, ವಿದ್ಯಾರ್ಥಿಗಳು ಶಾಲೆಗೆ ಬಂದು ಅಸೈನ್ಮೆಂಟ್ ಸಲ್ಲಿಸಬೇಕಿಲ್ಲ. ಮಕ್ಕಳ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರ ಇದಾಗಿದೆ. ಈ ನಿರ್ಧಾರದ ಬಗ್ಗೆ ಅನವಶ್ಯಕ ಗೊಂದಲ ಬೇಡವೆಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಈ ಮೊದಲು ಪ್ರಥಮ ಪಿಯುಸಿ ಪರೀಕ್ಷೆ ರದ್ದು ಮಾಡುವುದಾಗಿ ಹೇಳಲಾಗಿತ್ತು. ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿಯೇ ಪರೀಕ್ಷೆ ನಡೆಸುವಂತೆ ಎಲ್ಲಾ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದೆ.
ಮುಂದಿನ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ದಾಖಲಾತಿ ಪಡೆಯಲು ಹಾಗೂ ಆ ಅವಧಿಯಲ್ಲಿ ಅವರಿಗೆ ದೊರಕಬೇಕಾದ ವಿದ್ಯಾರ್ಥಿ ವೇತನದಂತಹ ಸೌಲಭ್ಯವನ್ನು ಪಡೆಯಲು ವಿದ್ಯಾರ್ಥಿಗಳ ಫಲಿತಾಂಶವನ್ನು ಅಂಕಗಳ ರೂಪದಲ್ಲಿ ದಾಖಲು ಮಾಡುವುದು ಅಗತ್ಯವಾಗಿರುತ್ತದೆ.
ಈ ಹಿನ್ನಲೆಯಲ್ಲಿ ಎಲ್ಲಾ ಕಾಲೇಜುಗಳ ಪ್ರಾಚಾರ್ಯರು ವಿದ್ಯಾರ್ಥಿಗಳು ಕಾಲೇಜಿಗೆ ಭೌತಿಕವಾಗಿ ಬಾರದಂತೆ ಕ್ರಮ ಕೈಗೊಂಡು, ಇಲಾಖೆಯ ಜಾಲತಾಣದಲ್ಲಿ ನೀಡಿದ ಎರಡು ಪ್ರಶ್ನೆಪತ್ರಿಕೆಗೆ ಉತ್ತರಿಸಿ, ಸ್ಕ್ಯಾನ್ ಮಾಡಿ, ವಾಟ್ಸ್ ಆಪ್ ಅಥವಾ ಇ ಮೇಲ್ ಮೂಲಕ ಅಥವಾ ಬರೆದಿರುವ ಅಸೈಮೆಂಟ್ ಗಳನ್ನು ಅಂಚೆ ಮೂಲಕ ಅಥವಾ ಇನ್ನಾವುದೇ ರೀತಿಯಲ್ಲಿ ಸಂಬಂಧಿಸಿದ ಉಪನ್ಯಾಸಕರಿಗೆ ಸಲ್ಲಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಬೇಕಿದೆ. ಎರಡೂ ಅಸೈನ್ ಮೆಂಟ್ ಗಳನ್ನು ಸಂಬಂಧಿಸಿದ ಉಪನ್ಯಾಸಕರು ಮೌಲ್ಯಮಾಪನ ಮಾಡಿ, ಅಂಕಗಳನ್ನು ನೀಡಿ, ಎಸ್.ಎ.ಟಿ.ಎಸ್. ತಂತ್ರಾಂಶದಲ್ಲಿ ನಮೂದಿಸಬೇಕಿದೆ.