ಬೆಂಗಳೂರು: 2023 -24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ -2 ಎಪ್ರಿಲ್ 29 ರಿಂದ ರಾಜ್ಯದಾತ್ಯಂತ ಆರಂಭವಾಗಲಿದೆ. 84,933 ಬಾಲಕರು, 64,367 ಬಾಲಕಿಯರು ಸೇರಿ ಒಟ್ಟು 1,49,300 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಇದೇ ಮೊದಲ ಬಾರಿಗೆ ಮೂರು ಬಾರಿ ಪರೀಕ್ಷೆ ಬರೆದು ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೆಯೋ ಅದನ್ನು ಉಳಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಈಗಾಗಲೇ ಪರೀಕ್ಷೆ ಒಂದು ಬರೆದು ಪಾಸಾಗಿದ್ದರೂ ಕೂಡ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಅವಕಾಶ ಇದೆ. ಪರೀಕ್ಷೆ 2ರ ಫಲಿತಾಂಶ ಸಮಾಧಾನ ತರದಿದ್ದಲ್ಲಿ ಮೇನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ 3 ಬರೆಯಬಹುದಾಗಿದೆ.
ಮೇ 14 ರವರೆಗೆ ಬೆಂಗಳೂರಿನ 39 ಸೇರಿ ರಾಜ್ಯದಾತ್ಯಂತ 301 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ 1ರಲ್ಲಿ ಅನುತ್ತೀರ್ಣರಾಗಿದ್ದ 89,221 ವಿದ್ಯಾರ್ಥಿಗಳು, ಹಿಂದಿನ ಪರೀಕ್ಷೆಯ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು 32,848 ವಿದ್ಯಾರ್ಥಿಗಳು, 27,092 ಪುನರಾವರ್ತಿತ ವಿದ್ಯಾರ್ಥಿಗಳು, ಪರೀಕ್ಷೆ 1ರ ವೇಳೆ ಶೇಕಡ 75 ರಷ್ಟು ಹಾಜರಾತಿ ಇಲ್ಲದೆ ಪರೀಕ್ಷೆಯಿಂದ ವಂಚಿತರಾಗಿದ್ದ 139 ಮಂದಿ ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.