ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1 ಇಂದಿನಿಂದ ಆರಂಭವಾಗಲಿದೆ.
ರಾಜ್ಯದಾತ್ಯಂತ 1124 ಕೇಂದ್ರಗಳಲ್ಲಿ 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮೊದಲ ದಿನ ಕನ್ನಡ ಮತ್ತು ಅರೇಬಿಕ್ ವಿಷಯದ ಪರೀಕ್ಷೆಗಳು ನಡೆಯಲಿದೆ.
ಮಾ. 22ರವರೆಗೆ ಪ್ರತಿದಿನ ಬೆಳಿಗ್ಗೆ 10.15ರಿಂದ 1.30ರವರೆಗೆ ಪರೀಕ್ಷೆ ನಡೆಯಲಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಮಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ವಾರ್ಷಿಕ ಪರೀಕ್ಷೆಯಲ್ಲಿ ಮೂರು ಬಾರಿ ಅವಕಾಶ ನೀಡಲಾಗಿದ್ದು, ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೆಯೋ ಅದನ್ನು ಉಳಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.
ಹಾಗಾಗಿ ವಿದ್ಯಾರ್ಥಿಗಳಿಗೆ ಯಾವುದೇ ಆತಂಕ ಬೇಡ, ಪರೀಕ್ಷೆ ಆರಂಭಕ್ಕೆ ಒಂದು ಗಂಟೆ ಮೊದಲೇ ಕೇಂದ್ರಕ್ಕೆ ಹೋಗಿ. ಹಾಲ್ ಟಿಕೆಟ್, ಪೆನ್ನು ತೆಗೆದುಕೊಂಡು ಹೋಗಿ. ಮೊಬೈಲ್, ವಾಚ್, ಕ್ಯಾಲ್ಕುಲೇಟರ್ ಸೇರಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧವಿದೆ. ಪ್ರಶ್ನೆ ಓದಿಕೊಳ್ಳಲು 15 ನಿಮಿಷ ಕಾಲಾವಕಾಶವಿದೆ. ಪ್ರತಿ ಪ್ರಶ್ನೆಗಳ ಓದಿ ಯೋಚಿಸಿ ಉತ್ತರ ಬರೆಯಿರಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್.