
ಮಂಗಳೂರು: ನಾಪತ್ತೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪಿಯು ವಿದ್ಯಾರ್ಥಿ ದಿಗಂತ್ ಕೊನೆಗೂ ಪತ್ತೆಯಾಗಿದ್ದಾನೆ. ನಾಪತ್ತೆಯಾದ 12 ದಿನಗಳ ಬಳಿಕ ಉಡುಪಿಯ ಡಿಮಾರ್ಟ್ ಮಾಲ್ ನಲ್ಲಿ ದಿಗಂತ್ ಪತ್ತೆಯಾಗಿದ್ದಾನೆ.
ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ ದಿಗಂತ್ ಫೆ.25ರಂದು ಸಂಜೆ ವ್ಯಾಯಾಮ ಶಾಲೆಗೆ ಹೋಗಿಬರುವುದಾಗಿ ಹೇಳಿ ಹೋದವನು ಏಕಾಏಕಿ ನಾಪತ್ತೆಯಾಗಿದ್ದ. ಎಷ್ಟು ಹುಡುಕಾಡಿದರೂ ಆತನ ಸುಳಿವು ಇರಲಿಲ್ಲ. ಆತನ ಪತ್ತೆಯಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಫರಂಗಿಪೇಟೆ ರೈಲ್ವೆ ಹಳಿಯಲ್ಲಿ ದಿಗಂತ್ ನ ಚಪ್ಪಲಿ ಹಗೂ ಮೊಬೈಲ್ ಪತ್ತೆಯಾಗಿತ್ತು. ಪತ್ತೆಯಾದ ಒಂದು ಚಪ್ಪಲಿ ಮೇಲೆರಕ್ತದ ಕಲೆ ಇರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿತ್ತು. ಪರೀಕ್ಷೆ ಭಯಕ್ಕೆ ಮನೆ ಬಿಟ್ಟಿದ್ದಾಗಿ ದಿಗಂತ್ ಹೇಳಿದ್ದಾನೆ.
ದ್ವಿತೀಯ ಪಿಯುಸಿ ಪರೀಕ್ಷೆಯ ಭಯದಿಂದ ಮನೆ ಬಿಟ್ಟಿದ್ದಾಗಿ ಪೊಲೀಸರ ಮುಂದೆ ವಿದ್ಯಾರ್ಥಿ ದಿಗಂತ್ ಒಪ್ಪಿಕೊಂಡಿದ್ದಾನೆ. ನಿಗೂಢವಾಗಿ ನಾಪತ್ತೆಯಾಗಿದ್ದ ದಿಗಂತ್ ಶಿವಮೊಗ್ಗ ತಲುಪಿ ಅಲ್ಲಿಂದ ಮೈಸೂರು, ಬೆಂಗಳೂರಿಗೆ ತೆರಳಿ ಹೋಟೆಲ್ ನಲ್ಲಿ ಕೆಲಸ ಮಾಡಿ ಸುತ್ತಾಡಿಕೊಂಡು ಉಡುಪಿಗೆ ಬಂದಿದ್ದು, ಡಿ ಮಾರ್ಟ್ ನಲ್ಲಿ ಪತ್ತೆಯಾಗಿದ್ದಾನೆ.
ತಾಯಿಗೆ ಕರೆ ಮಾಡಿ ಯಾರೋ ಬಲವಂತವಾಗಿ ಕರೆದುಕೊಂಡು ಹೋಗಿದ್ದರು ಎಂದು ಹೇಳಿದ್ದ. ನಾಪತ್ತೆಯಾದ ದಿನ ಮನೆಯ ಸಮೀಪ ರೈಲ್ವೆ ಹಳಿ ಬಳಿ ಹೋಗಿ ಅಲ್ಲಿ ಚಪ್ಪಲಿ ಬಿಟ್ಟು ಬೇರೆ ಶೂ ಹಾಕಿಕೊಂಡು ಪರಾರಿಯಾಗಿದ್ದ. ಬೈಕ್ ನಲ್ಲಿ ಮಂಗಳೂರು ತಲುಪಿದ್ದ ಬಾಲಕ ದಿಗಂತ್ ಬಸ್ ನಲ್ಲಿ ಶಿವಮೊಗ್ಗಕ್ಕೆ ತೆರಳಿ ಮೈಸೂರಿಗೆ ಪ್ರಯಾಣ ಬೆಳೆಸಿದ್ದ. ಮೈಸೂರಿನಿಂದ ರೈಲಿನಲ್ಲಿ ಬೆಂಗಳೂರಿಗೆ ತೆರಳಿದ್ದ. ಅಲ್ಲಿಂದ ನಂದಿಬೆಟ್ಟಕ್ಕೆ ಹೋಗಿ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಬಳಿಕ ವಿವಿಧ ಕಡೆ ಸುತ್ತಾಟ ನಡೆಸಿದ್ದ. ಅಲ್ಲಿಂದ ಉಡುಪಿಗೆ ಆಗಮಿಸಿ ಡಿ ಮಾರ್ಟ್ ಗೆ ಬಂದು ಪತ್ತೆಯಾಗಿದ್ದ. ಆತನನ್ನು ವಿಚಾರಣೆಗೊಳಪಡಿಸಿದಾಗ ದ್ವಿತೀಯ ಪಿಯುಸಿ ಪರೀಕ್ಷೆಯ ಭಯದಿಂದ ಮನೆ ಬಿಟ್ಟಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.