ಬೆಂಗಳೂರು: ಪಿಯುಸಿಯಲ್ಲಿ ಭಾಷಾ ವಿಷಯಗಳು, ಕಲೆ, ವಾಣಿಜ್ಯ ವಿಭಾಗದ ಕೋರ್ ವಿಷಯಗಳ ಪರೀಕ್ಷೆಗಳಿಗೆ ಈ ಶೈಕ್ಷಣಿಕ ವರ್ಷದಿಂದ 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಪರೀಕ್ಷೆ ನಡೆಸಲು ಸರ್ಕಾರದಿಂದ ಒಪ್ಪಿಗೆ ನೀಡಲಾಗಿದೆ.
2023 -24ನೇ ಶೈಕ್ಷಣಿಕ ಸಾಲಿನಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ 80 ಅಂಕಕ್ಕೆ ಪರೀಕ್ಷೆ ನಡೆಸಲಾಗುವುದು. 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಪರೀಕ್ಷೆ ನಡೆಸಲಾಗುವುದು. ಈ ಕುರಿತಾಗಿ ಇಲಾಖೆ ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದೆ.
ವಿದ್ಯಾರ್ಥಿಗಳು ಭಾಷಾ ಹಾಗೂ ಕೋರ್ ವಿಷಯಗಳಲ್ಲಿ ಕಾಲೇಜು ಹಂತದಲ್ಲಿ ಬರೆಯುವ ಎರಡು ಕಿರು ಪರೀಕ್ಷೆಗಳು, ಅರ್ಧವಾರ್ಷಿಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳಲ್ಲಿ ಉತ್ತಮವಾದ ಎರಡನ್ನು 10 ಅಂಕಗಳಿಗೆ ಪರಿವರ್ತಿಸಿ ಅವುಗಳ ಸರಾಸರಿ ಅಂಕಗಳನ್ನು ನೀಡಬೇಕು. ಅದೇ ರೀತಿ ಪ್ರಾಜೆಕ್ಟ್ ಹಾಗೂ ಅಸೆಸ್ಮೆಂಟ್ ಪ್ರಸ್ತುತಪಡಿಸುವಲ್ಲಿ ತಲಾ ಐದರಂತೆ ಒಟ್ಟು ಹತ್ತು ಅಂಕ ನೀಡಬೇಕು. ಒಟ್ಟಾರೆ ಫಲಿತಾಂಶ ನೀಡುವಾಗ 80 ಅಂಕದ ಲಿಖಿತ ಪರೀಕ್ಷೆ, 20 ಅಂಕದಿಂದ ಆಂತರಿಕ ಮೌಲ್ಯಮಾಪನದಲ್ಲಿ ಪಡೆದ ಅಂಕಗಳನ್ನು ಸೇರಿಸಿ ಫಲಿತಾಂಶ ಪ್ರಕಟಿಸಲಾಗುವುದು.
ಪ್ರಸ್ತುತ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ, ಗೃಹ ವಿಜ್ಞಾನ, ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತ ಸೇರಿ ಹಲವು ವಿಷಯಗಳಿಗೆ 70 ಅಂಕಗಳಿಗೆ ಲಿಖಿತ ಪರೀಕ್ಷೆಯ 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದ್ದುಮ ಇದು ಯಥಾಸ್ಥಿತಿಯಲ್ಲಿ ಮುಂದುವರೆಯುತ್ತದೆ,
ಪ್ರಾಯೋಗಿಕ ತರಗತಿ ಮತ್ತು ಪರೀಕ್ಷೆ ಇಲ್ಲದ ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಭಾಷಾ ವಿಷಯಗಳು ಕಲಾ, ವಾಣಿಜ್ಯ ವಿಭಾಗದ ಐಚ್ಛಿಕ ವಿಷಯಗಳು ಮತ್ತು ಇನ್ನಿತರ ಕೋರ್ ವಿಷಯಗಳಲ್ಲಿ ಇನ್ನು ಮುಂದೆ 80 ಅಂಕಗಳಿಗೆ ಲಿಖಿತ, 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಪರೀಕ್ಷೆ ನಡೆಯಲಿದೆ.