ಬೆಂಗಳೂರು: ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಬದಲಾವಣೆ ಮಾಡಲಾಗಿದೆ. ವಾರ್ಷಿಕ ಪರೀಕ್ಷೆ ಮಾದರಿಯಲ್ಲಿಯೇ ಅರ್ಧವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುವುದು. ಮುಖ್ಯಪರೀಕ್ಷೆಯ ರೀತಿಯಲ್ಲಿಯೇ ಮಧ್ಯವಾರ್ಷಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಸಿಬಿಎಸ್ಇ, ಮತ್ತು ಐಸಿಎಸ್ಇ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ನವೆಂಬರ್ 29 ರಿಂದ ಡಿಸೆಂಬರ್ 10ರವರೆಗೆ ಪರೀಕ್ಷೆ ನಡೆಯಲಿದ್ದು, ಪ್ರಶ್ನೆಪತ್ರಿಕೆ ತಯಾರಿ, ಮೌಲ್ಯಮಾಪನಕ್ಕಾಗಿ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗಿದೆ. ಈ ಮೊದಲು ಜಿಲ್ಲಾಮಟ್ಟದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುತ್ತಿತ್ತು. ಮೌಲ್ಯಮಾಪನ ಆಯಾ ಕಾಲೇಜಿನಲ್ಲಿ ನಡೆಯುತ್ತಿತ್ತು. ಈಗ ರಾಜ್ಯ ಮಟ್ಟದ ಅರ್ಧವಾರ್ಷಿಕ ಪರೀಕ್ಷೆ ನಡೆಸಲಾಗುತ್ತಿದೆ.
ನ. 29 ರಿಂದ ನಡೆಸಲಿರುವ ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆ ಬಗ್ಗೆ ಪುನರ್ ಪರಿಶೀಲಿಸಬೇಕೆಂದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಪದವಿಪೂರ್ವ ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಸಿಬಿಎಸ್ಇ ಮತ್ತು ಐಸಿಎಸ್ಇ ಮಂಡಳಿಗಳ ಮಾದರಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬದಲಾವಣೆ ಮಾಡಲಾಗಿದೆ. ಉಪನ್ಯಾಸಕರ ಕೊರತೆ ಮೊದಲಾದ ಕಾರಣಗಳಿಂದ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರುವುದು ಕಷ್ಟವಾಗುತ್ತದೆ. ಪರೀಕ್ಷೆಗೆ ನಿಗದಿಪಡಿಸಿದ ಪಠ್ಯಕ್ರಮದ ಎಲ್ಲ ಪಠ್ಯ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕಾಲೇಜುಗಳಿಗೆ ಹೊಸ ಸಂಯೋಜನೆ ಮಂಜೂರು ಮಾಡಿದ್ದರೂ, ಹುದ್ದೆಗಳನ್ನು ಮಂಜೂರು ಮಾಡಿಲ್ಲ. ಅತಿಥಿ ಉಪನ್ಯಾಸಕರ ನೇಮಕಾತಿಗೆ ತಾಂತ್ರಿಕ ತೊಂದರೆ ಇದೆ. ಇವೆಲ್ಲ ಕಾರಣಗಳಿಂದ ಅರ್ಧವಾರ್ಷಿಕ ಪರೀಕ್ಷೆ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು ಎಂದು ಹೇಳಲಾಗಿದೆ.