ಆರೋಗ್ಯವು ಎಲ್ಲಾರಿಗೂ ಪ್ರಮುಖವಾದುದು, ಪ್ರತಿ ಉದ್ದೇಶಿತ ಫಲಾನುಭವಿಗೂ ಆರೋಗ್ಯ ಯೋಜನೆಗಳನ್ನು ತಲುಪಿಸುತ್ತಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಉಪ ಮೇಯರ್ ಬಿ.ಜಾನಕಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ಕುಮಾರ್ ರಸ್ತೆಯ ಜಿಲ್ಲಾ ಆಸ್ಪತ್ರೆ ಆವರಣದ ಡಿ.ಎನ್.ಬಿ ಹಾಲ್ನಲ್ಲಿ ಬುಧವಾರ ಏರ್ಪಡಿಸಿದ್ದ ಸಮುದಾಯಕ್ಕೆ ಆರೋಗ್ಯ ಸೇವೆಗಳನ್ನು ಸಂಪೂರ್ಣವಾಗಿ ತಲುಪಿಸುವ ‘ಆಯುಷ್ಮಾನ್ ಭವ’ ಅಭಿಯಾನ ಶುಭಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರು ‘ಆಯುಷ್ಮಾನ್ ಭವ’ ಯೋಜನೆ ಪಡೆದುಕೊಳ್ಳಿ
ಪ್ರತಿಯೊಬ್ಬರೂ ಆರೋಗ್ಯ ಕುರಿತಾಗಿ ಜಾಗೃತಿ ಹೊಂದಬೇಕು. ಕೇಂದ್ರ ಮತ್ತು ರಾಜ್ಯ ಸರಕಾರದ ಆರೋಗ್ಯ ಸೇವೆಗಳನ್ನು ಎಲ್ಲರೂ ಪಡೆದುಕೊಳ್ಳಬೇಕು. ‘ಆಯುಷ್ಮಾನ್ ಭವ’ ಸಾರ್ವಜನಿಕ ಆರೋಗ್ಯ ಅಭಿಯಾನವಾಗಿದ್ದು, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಜನರಿಗಾಗಿ ಸೆ.17 ರಿಂದ ಈ ಅಭಿಯಾನ ಪ್ರಾರಂಭವಾಗಲಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುಜರಾತ್ನ ರಾಜಭವನದಲ್ಲಿ ಆರೋಗ್ಯ ಇಲಾಖೆಯ ಒಂದೇ ಸೂರಿನಡಿ ಹಲವು ಕಾರ್ಯಕ್ರಮಗಳನ್ನು ಹೊಂದಿರುವ ‘ಆಯುಷ್ಮಾನ್ ಭವ’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸೆ.17 ರಿಂದ ಪ್ರತಿ ಮಂಗಳವಾರ ಆರೋಗ್ಯ ತಪಾಸಣಾ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡು ರಕ್ತದೊತ್ತಡ, ಸಕ್ಕರೆ ಖಾಯಿಲೆ, ಮತ್ತು ಬಾಯಿ, ಸ್ಥನ, ಗರ್ಭಕೋಶದ ಕ್ಯಾನ್ಸರ್ ಗಳ ತಪಾಸಣೆಗೆ ಒತ್ತು ನೀಡಲಾಗುವುದು. ಇಲ್ಲಿಯವರೆಗೆ 17,92,727 ಜನರ ನೋಂದಣಿ ಮಾಡಿಸಲಾಗಿದ್ದು, ಇವರಲ್ಲಿ 30 ವರ್ಷ ಮೇಲ್ಪಟ್ಟ 6,70,047 ಮಹಿಳೆಯರ ತಪಾಸಣೆ ಮಾಡಲಾಗಿದೆ. ಅಲ್ಲದೆ ಕ್ಷಯರೋಗಿಗಳಿಗೆ ಚಿಕಿತ್ಸೆಯನ್ನು ಸಂಪೂರ್ಣವಾಗಿ ಒದಗಿಸುವ ಖಾತ್ರಿ ಕೈಗೊಳ್ಳಲಾಗುವುದು. ಹಾಗೂ ನೀಕ್ಷಯ ಮಿತ್ರದಡಿ ದಾನಿಗಳಿಂದ ಉಚಿತ ಪೌಷ್ಟಿಕ ಅಹಾರ ಕಿಟ್ಗಳನ್ನು ಒದಗಿಸಲಾಗುತ್ತಿದೆ ಪ್ರಸ್ತುತ 1450 ಕಿಟ್ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ತಜ್ಞರ ಮೂಲಕ ಎಲ್ಲಾ ಆರೋಗ್ಯ ಸೇವೆಗಳನ್ನು ಜಿಲ್ಲೆಯ ರೂಪನಗುಡಿ, ಮೋಕಾ, ತೆಕ್ಕಲಕೊಟೆ, ತೋರಣಗಲ್ಲು, ಕುರುಗೋಡು, ಕಂಪ್ಲಿ ತಾಲೂಕುಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಕೈಗೊಳ್ಳಲಾಗುವುದು ಎಂದರು.
ಆಯುಷ್ಮಾನ್ ಸಭೆಗಳನ್ನು ಹಮ್ಮಿಕೊಂಡು, ವಿವಿಧ ಆರೋಗ್ಯ ಸೇವೆಗಳ ಬಗ್ಗೆ ಗ್ರಾಮ/ವಾರ್ಡ್ ಮಟ್ಟದ ಸಭೆಗಳನ್ನು ಹಮ್ಮಿಕೊಳ್ಳಲಾಗುವುದು. ಸೇವಾ ಪಕ್ವಾಡಾ ಮೂಲಕ ಆಯುಷ್ಮಾನ್ ಭವ ಸೇವೆಗಳನ್ನು ಪರಿಣಾಮಕಾರಿ ಕೈಗೊಳ್ಳಲು ಶ್ರಮಿಸಲಾಗುವುದು. ಎಲ್ಲ ಸರಕಾರಿ ಆರೋಗ್ಯ ಕೇಂದ್ರಗಳ ಸ್ವಚ್ಛತೆಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕ್ರಮವಹಿಸಲಾಗುವುದು ಎಂದರು.
ಬಹಳಷ್ಟು ಜನತೆಗೆ ಅಂಗಾಂಗಗಳ ಅವಶ್ಯಕತೆ ಇರುವ ಹಿನ್ನಲೆಯಲ್ಲಿ ನಿರ್ದಿಷ್ಟ ಮಾನದಂಡಗಳ ಆಧಾರವಾಗಿಟ್ಟುಕೊಂಡು, ಅಂಗಾಂಗ ದಾನಕ್ಕೆ ಹೆಸರು ನೋಂದಣಿಗೆ ಜಾಗೃತಿ ನೀಡಲಾಗುವುದು. ಪ್ರಸ್ತುತ 84 ಜನರು ನೇತ್ರದಾನ ಮಾಡಿದ್ದಾರೆ ಎಂದು ತಿಳಿಸಿದ ಅವರು, ರಕ್ತದಾನ ಶಿಬಿರಗಳು ಪ್ರತಿಯೊಬ್ಬರಲ್ಲೂ ರಕ್ತದಾನದ ಅವಶ್ಯಕತೆಯ ಮಹತ್ವ ಸಾರಲೂ ಗ್ರಾಮ ಪಂಚಾಯತಿಗಳ ಸಹಕಾರದೊಂದಿಗೆ ಉಚಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆಯುಷ್ಮಾನ್ ಕಾರ್ಡ್, ಎಬಿ-ಪಿಎಮ್ಜೆಎವೈ-ಆರ್ಕೆ ಕಾರ್ಡ್ಗಳ ಮೂಲಕ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷದವರೆಗೆ ಹಾಗೂ ಎಪಿಎಲ್ ಕುಟುಂಬಗಳಿಗೆ ವಾರ್ಷಿಕ 1.5 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚವನ್ನು ಸುಸಜ್ಜಿತ ಸರಕಾರಿ ಅಥವಾ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ನೀಡಲಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ ಗ್ರಾಮ್-ಒನ್ ಹಾಗೂ ವಿವಿಧ ಸೇವಾ ಕೇಂದ್ರಗಳ ಮೂಲಕ 4,85,395 ಜನರ ನೊಂದಣಿ ಮಾಡಿಸಲಾಗಿದೆ ಎಂದು ತಿಳಿಸಿದರು.
ಅಭಾ ಕಾರ್ಡ್ ಡಿಜಿಟಲ್ ಆರೋಗ್ಯ ದಾಖಲೀಕರಣ ಅಕೌಂಟ್ ಮೂಲಕ ಒಮ್ಮೆ ತಮ್ಮ ಹೆಸರಿನ ನೊಂದಣಿ ಮಾಡಿಸಿದಲ್ಲಿ ದೇಶದ ಯಾವುದೇ ಭಾಗದಲ್ಲಿ ಚಿಕಿತ್ಸೆಗೆ ತೆರಳಿದರೂ ಸಹ ಆರೋಗ್ಯದ ಮಾಹಿತಿ ಲಭ್ಯವಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ 7,32,102 ಜನರ ನೊಂದಣಿ ಮಾಡಿಸಲಾಗಿದೆ. ಪ್ರಸ್ತುತ ಅಭಿನಯಾನದಲ್ಲಿ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿಜಿಟಲ್ ಹೆಲ್ತ್ಕಾರ್ಡ್ (ಆಭಾ ಕಾರ್ಡ್) ವಿತರಿಸಲಾಯಿತು. ಜಿಲ್ಲೆಯಲ್ಲಿ ಕ್ಷಯರೋಗಿಗಳಿಗೆ ಆಹಾರ ಪಡಿತರ ಕಿಟ್ ವಿತರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಆರ್.ಅನೀಲ್ ಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ವೀರೇಂದ್ರ ಕುಮಾರ್, ಡಾ.ಗುರುನಾಥ್ ಚೌವ್ಹಾಣ್, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ ಕುಮಾರಿ ಸೇರಿದಂತೆ ನರ್ಸಿಂಗ್ ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.