ತುಮಕೂರು: ಕಳಪೆ ಕಾಮಗಾರಿ ವಿರುದ್ಧ ಕಿಡಿಕಾರಿದ್ದ ಸಾರ್ವಜನಿಕರನ್ನು ಏಕವಚನದಲ್ಲಿ ನಿಂದಿಸಿದ್ದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಓರ್ವರನ್ನು ಅಮಾನತು ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಮಧುಗಿರಿ ತಾಲೂಕಿನ ಐಡಿಹಳ್ಳಿ ಗ್ರಾಮದಲ್ಲಿ ನಿರ್ಮಿಸಿದ್ದ ರಸ್ತೆ ಕಾಮಗಾರಿ ಕಳಪೆಯಾಗಿದೆ. ವರ್ಷದಲ್ಲಿ ಡಾಂಬರು ಕಿತ್ತು ಗುಂಡಿಗಳು ಬಿದ್ದಿವೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ರಸ್ತೆ ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ಆಗಮಿಸಿದ್ದ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ದೀಪಕ್ ಯಾದವ್, ಸಾರ್ವಜನಿಕರನ್ನು ನಿಂದಿಸಿದ್ದರು. ಅಲ್ಲದೇ ನಾನು ಪಿಡಬ್ಲ್ಯುಡಿ ಎಂಜಿನಿಯರ್, ಏನು ಮಾಡ್ಕೋತಿರೋ ಮಾಡ್ಕೊಳಿ ಹೋಗಿ ಎಂದು ಆವಾಜ್ ಹಾಕಿದ್ದರು.
ಎಂಜಿನಿಯರ್ ವರ್ತನೆ ಖಂಡಿಸಿ ಗ್ರಾಮಸ್ಥರು ಕಾರನ್ನು ತಡೆದು ಘೆರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಸಾರ್ವಜನಿಕರ ಮೇಲೆ ದರ್ಪ ಮೆರೆದ ಆರೋಪದ ಹಿನ್ನೆಲೆಯಲ್ಲಿ ದೀಪಕ್ ಯಾದವ್ ಅವರನ್ನು ಅಮಾನತು ಮಾಡಿ ಲೋಕೋಪಯೋಗಿ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.