ತುಮಕೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳು, ಯುವಕರು ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಲ್ಲೋರ್ವ ಯುವಕ ತಾಯಿ ತನಗೆ ಮೊಬೈಲ್ ಚಾರ್ಜರ್ ಕೊಡಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿಂಗರೆಡ್ದಿ ಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ.
18 ವರ್ಷದ ನಿಖಿಲ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಆಶಾ ಕಾರ್ಯಕರ್ತೆಯಾಗಿರುವ ವರಲಕ್ಷ್ಮಮ್ಮ ಎಂಬುವವರ ಮಗನಾಗಿರುವ ನಿಖಿಲ್, ಪಾವಗಡದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಯುವಕ ತನ್ನ ತಾಯಿಗೆ ಮೊಬೈಲ್ ಚಾರ್ಜರ್ ಕೊಡುವಂತೆ ಕೇಳಿದ್ದಾನೆ. ತನ್ನ ಬಳಿ ಚಾರ್ಜರ್ ಇಲ್ಲ ಎಂದು ತಾಯಿ ಹೇಳಿ ಸಮೀಪದ ಮನೆಗೆ ಹೂ ಕಟ್ಟಲು ಹೋಗಿದ್ದಾರೆ.
ವಾಪಸ್ ಮನೆಗೆ ಬಂದು ನೋಡಿದಾಗ ಮಗ ನಿಖಿಲ್ ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ವೈ.ಎನ್.ಹೊಸಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.