ಬೆಂಗಳೂರು: ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳನ್ನು ಬಂದ್ ಮಾಡುವ ಸಾಧ್ಯತೆ ಇದೆ. ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್ ನಲ್ಲಿ ಈ ಕುರಿತು ಸುಳಿವು ದೊರೆತಿದೆ. ಶಿಕ್ಷಣ ತಜ್ಞರು, ಉಪನ್ಯಾಸಕರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್ ನಲ್ಲಿ 40 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಲಭ್ಯವಿರುವ ಹುದ್ದೆಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಮರೆ ಮಾಚುತ್ತಿದೆ. ಇದು ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳನ್ನು ಮುಚ್ಚುವ ಹುನ್ನಾರವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕಡಿಮೆ ಮಕ್ಕಳಲ್ಲಿರುವ ಕಾಲೇಜುಗಳಲ್ಲಿನ ಬೋಧಕ ಹುದ್ದೆಗಳನ್ನು ವರ್ಗಾವಣೆಗೆ ತೋರಿಸುತ್ತಿಲ್ಲ. ಅವುಗಳನ್ನು ಮುಚ್ಚುವ ಹುನ್ನಾರದ ಭಾಗ ಇದಾಗಿದೆ ಎಂದು ಹೇಳಲಾಗಿದೆ.
ಶಿಕ್ಷಣ ತಜ್ಞ ನಿರಂಜನಾರಾಧ್ಯ ಅವರು ಉಪನ್ಯಾಸಕರ ವರ್ಗಾವಣೆ ಮಾರ್ಗಸೂಚಿಯಲ್ಲಿ ಸರ್ಕಾರ ತಪ್ಪು ನೀತಿ ಅನುಸರಿಸುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ನೂರಾರು ಪದವಿ ಪೂರ್ವ ಕಾಲೇಜುಗಳು ಮುಚ್ಚಿ ಹೋಗುವುದು ಖಚಿತವಾಗಿದೆ. ಈ ಕಾಲೇಜುಗಳು ಮುಚ್ಚಿದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಅರ್ಧದಲ್ಲಿಯೇ ಮೊಟಕಾಗುತ್ತದೆ. ಸರ್ಕಾರ ಎಚ್ಚೆತ್ತುಕೊಂಡು 40ಕ್ಕಿಂತ ಕಡಿಮೆ ಮಕ್ಕಳಿರುವ ಪಿಯು ಕಾಲೇಜುಗಳಲ್ಲಿ ವಿಷಯವಾರು ಲಭ್ಯವಿರುವ ಉಪನ್ಯಾಸಕರ ಹುದ್ದೆಗಳನ್ನು ವರ್ಗಾವಣೆ ಕೌನ್ಸೆಲಿಂಗ್ ನಲ್ಲಿ ತೋರಿಸಿ ಆ ಸ್ಥಳಗಳಿಗೆ ಉಪನ್ಯಾಸಕರು ವರ್ಗಾವಣೆ ಪಡೆದು ಬರಲು ಅವಕಾಶ ಕಲ್ಪಿಸಬೇಕು. ಕಡಿಮೆ ಮಕ್ಕಳಿರುವ ಕಾಲೇಜುಗಳಲ್ಲಿ ದಾಖಲಾತಿ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಬೋಜೇಗೌಡ ಮೊದಲಾದವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ, ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು ಮಂಜೂರಾಗಿರುವ ಎಲ್ಲಾ ಹುದ್ದೆಗಳನ್ನು ವರ್ಗಾವಣೆಗೆ ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ.