ರಾಜಕೀಯ ನಾಯಕರು ಹಾಗೂ ಮಿಲಿಟರಿ ನಡವಿನ ಸಂಘರ್ಷದಿಂದ ಸುದ್ದಿಯಾಗುತ್ತಿರುವ ಪಾಕಿಸ್ತಾನದಲ್ಲಿ, ಪಿಟಿಐ ಪಕ್ಷದ ನಾಯಕ ಫವಾದ್ ಚೌಧರಿ ಬಂಧನದ ಭೀತಿಯಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಒಳಗೆ ಓಡಿ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಪಿಟಿಐ ನಾಯಕನ ಬಂಧನದ ವಿರುದ್ಧ ಹೈಕೋರ್ಟ್ ರಕ್ಷಣೆಯ ಆದೇಶ ನೀಡಿತ್ತು. ಆದಾಗ್ಯ, ಅವರನ್ನು ಬಂಧಿಸಲೆಂದು ಪೊಲೀಸರು ಕೋರ್ಟ್ ಹೊರಗೆ ಕಾಯುತ್ತಾ ನಿಂತಿದ್ದರು.
ತಮ್ಮ ಕಾರಿನಿಂದ ಇಳಿಯುತ್ತಲೇ ಎದ್ದೆನೋ ಬಿದ್ದೆನೋ ಎಂಬಂತೆ ಕೋರ್ಟ್ ಆವರಣದೊಳಗೆ ಓಡಿ ಹೋಗಿದ್ದಾರೆ ಫವಾದ್. ಈ ವೇಳೇ ಅಲ್ಲಿಯೇ ಇದ್ದ ಪೊಲೀಸರೇನು ಅವರನ್ನು ಅಟ್ಟಿಸಿಕೊಂಡು ಹೋಗಿಲ್ಲ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನವಾಗುತ್ತಲೇ ದೇಶಾದ್ಯಂತ ಗಲಭೆಗಳು ಆರಂಭಗೊಂಡ ಬೆನ್ನಲ್ಲಿ ಫವಾದ್‌ರನ್ನು ಮೇ 10ರಂದು ಸಾರ್ವಜನಿಕ ಶಾಂತಿ ಕಾಪಾಡಲೆಂದು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಅವರ ಬಂಧನವನ್ನು ’ಅಕ್ರಮ’ ಎಂದು ಆದೇಶಿಸಿದ ಹೈಕೋರ್ಟ್, ಸೆಕ್ಷನ್ 144 ಜಾರಿಯಲ್ಲಿರುವ ಪ್ರದೇಶಗಳಲ್ಲಿ ಮತ್ತೆ ಪ್ರತಿಭಟನೆಗೆ ಮುಂದಾಗುವುದಿಲ್ಲ ಎಂದು ಸಹಿ ಮಾಡಿಸಿಕೊಂಡಿತ್ತು.
ಇಷ್ಟೆಲ್ಲಾ ಆದ ಬಳಿಕವೂ ಪೊಲೀಸರು ಫವಾದ್‌ರನ್ನು ಮತ್ತೊಮ್ಮೆ ಬಂಧಿಸಲು ಯತ್ನಿಸಿದ್ದರು.
ಮೇ 9ರಂದು ಇಮ್ರಾನ್ ಖಾನ್‌ರನ್ನು ಇಸ್ಲಾಮಾಬಾದ್ ಹೈಕೋರ್ಟ್ ಆವರಣದಲ್ಲಿ ಅರೆಸೇನಾ ಪಡೆ ಸಿಬ್ಬಂದಿ ಬಂಧಿಸಿದ್ದರು. ಮೇ 12ರಂದು ಖಾನ್‌ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಮೇ 17ರವರೆಗೂ ಬಂಧಿಸದಂತೆ ಆದೇಶ ನೀಡಿತ್ತು.