ಚಂಡೀಗಢ: ಕೊಟ್ಟ ಮಾತನ್ನು ಮುಖ್ಯಮಂತ್ರಿ ಭಗವಂತ ಮಾನ್ ಈಡೇರಿಸಲಿಲ್ಲ ಎಂಬ ಕಾರಣಕ್ಕೆ ಪಂಜಾಬ್‍ನಲ್ಲಿ ದೈಹಿಕ ಬೋಧಕ ತರಬೇತಿ ಪಡೆದ ಶಿಕ್ಷಕಿಯರು ನೀರಿನ ಟ್ಯಾಂಕ್ ಏರಿ ಪ್ರತಿಭಟನೆ ಮಾಡಿದ್ದಾರೆ.
ಪಂಜಾಬ್‍ನಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಉದ್ಯೋಗ ನೀಡೋದಾಗಿ ಭರವಸೆ ನೀಡಿದ್ದರಂತೆ.
ಆದರೆ ಇದೀಗ ಉದ್ಯೋಗ ನೀಡುತ್ತಿಲ್ಲ ಅಂತ ದೈಹಿಕ ಶಿಕ್ಷಕಿಯರು ನೀರಿನ ಟ್ಯಾಂಕ್ ಮೇಲೇರಿ ಪ್ರತಿಭಟನೆ ನಡೆಸಿದ್ದಾರೆ. ಹೌದು, ಮೊಹಾಲಿಯಲ್ಲಿ ನೀರಿನ ಟ್ಯಾಂಕ್‍ಗೆ ಹತ್ತಿದ್ದರು. ಇದರ ಜೊತೆಗೆ ಪೆಟ್ರೋಲ್ ತುಂಬಿದ ಬಾಟಲಿಯೊಂದಿಗೆ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಸರ್ಕಾರಿ ಶಾಲೆಗಳಿಗೆ ದೈಹಿಕ ಶಿಕ್ಷಕರ ನೇಮಕ ಮಾಡುವಂತೆ ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಯುತ್ತಿದೆ. ಆದರೂ ತಲೆ ಕೆಡಿಸಿಕೊಂಡಿಲ್ಲ ಹಿಂದಿನ ಸರ್ಕಾರ. ನಮ್ಮ ಸರ್ಕಾರ ಬಂದ ಕೂಡಲೇ ಉದ್ಯೋಗ ನೀಡುತ್ತೇವೆ ಎಂದು ಮಾನ್ ಭರವಸೆ ನೀಡಿದ್ದರಂತೆ. ಆದರೆ ಸರ್ಕಾರ ಬಂದು ಏಳು ತಿಂಗಳಾದರೂ ಇದರ ಬಗ್ಗೆ ಚಕಾರೆತ್ತುತ್ತಿಲ್ಲ ಎಂದು ಆ ಶಿಕ್ಷಕಿಯರು ಹೇಳಿದ್ದಾರೆ.