
ರಾಯಚೂರು: ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಿಎಸ್ ಐ ಓರ್ವವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಿಎಸ್ ಐ ಮಣಿಕಂಠ ವಿರುದ್ಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಹಲ್ಲೆ, ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ನಿರುಪಾದಿ ಎಂಬುವವರು ಸೆ.20ರಂದು ಮಸ್ಕಿಯಲ್ಲಿ ಟ್ರ್ಯಾಕ್ಟರ್ ನಲ್ಲಿ ಮಣ್ಣು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪಿಎಸ್ ಐ ಮಣಿಕಂಠ ಟ್ರ್ಯಾಕ್ಟರ್ ನಲ್ಲಿ ಮಣ್ಣು ಸಾಗಿಸಲು 20 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು. ಅಲ್ಲದೇ ತನ್ನ ಜೀಪ್ ನಲ್ಲಿದ್ದ ಪೈಪ್ ತೆಗೆದುಕೊಂಡು ಟ್ರ್ಯಾಕ್ಟರ್ ಚಾಲಕ ನಿರುಪಾದಿಗೆ ಮನಬಂದಂತೆ ಥಳಿಸಿದ್ದರು. ಅಲ್ಲದೇ ಜಾತಿ ನಿಂದನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಗಂಭೀರವಾಗಿ ಹಲ್ಲೆಗೊಳಗಾದ ನಿರುಪಾದಿ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆ ಸಂಬಂಧ ಜನರು ಎರಡು ದಿನಗಳಿಂದ ಪ್ರತಿಭಟನೆ ನಡೆಸಿದ್ದರು. ಪಿಎಸ್ ಐ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಇದೀಗ ಪಿಎಸ್ ಐ ಮಣಿಕಂಠ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.