ಬೆಂಗಳೂರು: 545 ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ತನಿಖೆ ಮುಂದುವರೆದಿದೆ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 27ನೇ ರ್ಯಾಂಕ್ ಪಡೆದುಕೊಂಡಿದ್ದ ಹಾವೇರಿ ತಾಲೂಕಿನ ಗುಡಸಲಕೊಪ್ಪ ಗ್ರಾಮದವರಾದ ವಿವೇಕನಗರ ಪೋಲೀಸ್ ಠಾಣೆ ಕಾನ್ಸ್ಟೇಬಲ್ ಬಸವನಗೌಡ ಟಿ. ಕರಿಗೌಡರ ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ.
ನೇಮಕಾತಿ ಆದೇಶವಿಲ್ಲದೆ ಸಮವಸ್ತ್ರ ಧರಿಸುವುದು ನಿಯಮಬಾಹಿರವಾಗಿದೆ. ಪಿಎಸ್ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 27ನೇ ರ್ಯಾಂಕ್ ಪಡೆದುಕೊಂಡಿದ್ದ ಬಸವನಗೌಡ ಕರಿಗೌಡರ ಡಬಲ್ ಸ್ಟಾರ್ ಸಮೇತ ಸಮವಸ್ತ್ರ ಧರಿಸಿ ಹಾವೇರಿ ತಾಲೂಕಿನ ಗುಡಿಸಲಕೊಪ್ಪ ಗ್ರಾಮದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ, ಪಿಎಸ್ಐ ಸಮವಸ್ತ್ರದಲ್ಲಿದ್ದ ಅವರಿಗೆ ಶುಭಾಶಯದ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು.
ಪಿಎಸ್ಐ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಬಸವನಗೌಡ ಅವರನ್ನು ಕೂಡ ವಿಚಾರಣೆ ನಡೆಸಿ ಓಎಂಆರ್ ಪ್ರತಿ ಮತ್ತು ಇತರ ದಾಖಲೆಗಳನ್ನು ಕೂಡ ಪಡೆದುಕೊಂಡಿದ್ದರು. ನೇಮಕಾತಿ ಆದೇಶಕ್ಕೆ ಮೊದಲೇ ಸಮವಸ್ತ್ರ ಧರಿಸಿ ಊರಿನ ಕಾರ್ಯಕ್ರಮಗಳಲ್ಲಿ ಬಸವನಗೌಡ ಭಾಗಿಯಾಗಿದ್ದ ಬಗ್ಗೆ ಪರಿಶೀಲನೆ ನಡೆಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಅವರನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.