
ಬೆಂಗಳೂರು: ರಿಕವರಿ ಚಿನ್ನ ದುರ್ಬಳಕೆ, ಚಿನ್ನದ ವ್ಯಾಪಾರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಾಟನ್ ಪೇಟೆ ಠಾಣೆಯ ಪಿಎಸ್ಐ ಸಂತೋಷ್ ಅವರನ್ನು ಅಮಾನತು ಮಾಡಲಾಗಿದೆ.
ಪ್ರಕರಣವೊಂದರ ರಿಕವರಿ ಚಿನ್ನ ದುರ್ಬಳಕೆ ಮಾಡಿಕೊಂಡಿದ್ದರು. ಹೀಗಾಗಿ ಚಿನ್ನದ ಅಂಗಡಿ ಮಾಲೀಕನ ಬಳಿ ರಿಕವರಿ ಚಿನ್ನ ತೋರಿಸಬೇಕಿದೆ. ಫೋಟೋ ತೆಗೆಸಿ ವಾಪಸ್ ಕೊಡುತ್ತೇನೆ. ನಿನ್ನ ಬಳಿ ಇರುವ ಚಿನ್ನದ ಗಟ್ಟಿ ಕೊಡು ಎಂದು ಕೇಳಿಕೊಂಡಿದ್ದರು. ಅಂತೆಯೇ 950 ಗ್ರಾಂಚಿನ್ನದ ಗಟ್ಟಿಯನ್ನು ಅಂಗಡಿಯ ಮಾಲೀಕ ನೀಡಿದ್ದರು. ಅಂಗಡಿಯ ಮಾಲೀಕ ಚಿನ್ನ ಕೊಟ್ಟಿದ್ದ ಚಿನ್ನವನ್ನು ವಾಪಸ್ ಕೇಳಿದಾಗ ಹಣ ನೀಡುತ್ತೇನೆ ಎಂದು ಭದ್ರತೆಗೆ ನಿವೇಶನ ಕರಾರು ಮಾಡಿಕೊಂಡಿದ್ದ ಪಿಎಸ್ಐ ಸಂತೋಚ್ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಚಿನ್ನದ ಅಂಗಡಿ ಮಾಲೀಕ ಪ್ರಶ್ನಿಸಿದಾಗ ಖಾಲಿ ಚೆಕ್ ಗಳನ್ನು ನೀಡಿದ್ದರು. ಅವರು ನೀಡಿದ್ದ ಚೆಕ್ ಬೌನ್ಸ್ ಆಗಿದ್ದು, ಮತ್ತೆ ಹಣ ಅಥವಾ ಚಿನ್ನ ಕೊಡುವಂತೆ ಕೇಳಿದಾಗ ಬೆದರಿಕೆ ಹಾಕಿದ್ದರು.
ಅಂಗಡಿ ಮಾಲೀಕ ಡಿಸಿಪಿಗೆ ದೂರು ನೀಡಿದ್ದರು. ಎಸಿಪಿ ನೇತೃತ್ವದಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿ ವರದಿ ಸಲ್ಲಿಸಲಾಗಿತ್ತು. ಪ್ರಾಥಮಿಕ ಆಧಾರದ ಮೇಲೆ ಪಿಎಸ್ಐ ಮೇಲೆ ಕ್ರಮಕ್ಕೆ ಸೂಚನೆ ನೀಡಲಾಗಿತ್ತು. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಸಂತೋಷ್ ವಿರುದ್ಧ ಹಣ ದುರುಪಯೋಗ, ಬೆದರಿಕೆ ಪ್ರಕರಣ ದಾಖಲಾಗಿದ್ದು, ಪೊಲೀಸ್ ಆಯುಕ್ತರು ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.