ಮೈಸೂರು: ಮಹಿಳಾ ಪಿಎಸ್ ಐ ವ್ಹೀಲಿಂಗ್ ಪುಂಡಾಟಕ್ಕೆ ವೃದ್ಧರೊಬ್ಬರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿ ಸೈಯ್ಯದ್ ಐಮಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಮಗನ ಶೋಕಿಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ನಂಜನಗೂಡು ಸಂಚಾರಿ ವಿಭಾಗದ ಪಿಎಸ್ ಐ ಯಾಸ್ಮಿನ್ ತಾಜ್ ಅವರನ್ನು ಎತ್ತಂಗಡಿ ಮಾಡಲಾಗಿದೆ.
ನಂಜನಗೂಡು ಸಂಚಾರ ವಿಭಾಗದ ಪಿಎಸ್ ಐ ಯಾಸ್ಮಿನ್ ತಾಜ್ ಅವರ ಪುತ್ರ ಸೈಯ್ಯದ್ ಐಮಾನ್ ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ನಿನ್ನೆ ವೃದ್ಧ ರೈತ ಗುರುಸ್ವಾಮಿ ಎಂಬುವವರು ಮೃತಪಟ್ಟಿದ್ದರು. ಪ್ರಕರಣ ಸಂಬಂಧ ತಡರಾತ್ರಿ ಆರೋಪಿ ಸೈಯ್ಯದ್ ಐಮಾನ್ ನನ್ನು ಬಂಧಿಸಲಾಗಿದೆ.
ಈ ಪ್ರಕರಣದ ಬೆನ್ನಲ್ಲೇ ಸಂಚಾರಿ ವಿಭಾಗದ ಪಿಎಸ್ ಐ ಯಾಸ್ಮಿನ್ ತಾಜ್ ಅವರನ್ನು ಜಿಲ್ಲಾ ಅಪರಾಧ ದಾಖಲೆಗಳ ವಿಭಾಗಕ್ಕೆ ವರ್ಗಾವಣೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ತನ್ನನ್ನು ವರ್ಗಾವಣೆ ಮಾಡಿದ್ದಕ್ಕೆ ಪೊಲೀಸ್ ಇಲಾಖೆ ವಿರುದ್ಧ ಯಾಸ್ಮಿನ್ ತಾಜ್ ಅಸಮಾಧಾನ ವ್ಯಕ್ತಪಡಿಸಿದ್ದು, ವರ್ಗಾವಣೆ ಆದೇಶ ಪ್ರತಿಯನ್ನು ವಾಟ್ಸಾಪ್ ಗೆ ಹಾಕಿ ನನ್ನ ಪ್ರೀತಿಯ ಇಲಾಖೆಯಿಂದ ಇದನ್ನು ಪಡೆದುಕೊಂಡಿದ್ದೇನೆ… ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ಪೋಸ್ಟ್ ನಲ್ಲಿ ಪೆಟ್ಟು ತಿಂದಿದ್ದಕ್ಕೆ ಕಲ್ಲು ವಿಗ್ರಹವಾಯ್ತು. ಆದರೆ ಪೆಟ್ಟುಕೊಟ್ಟ ಸುತ್ತಿಗೆ ಸುತ್ತಿಗೆಯಾಗಿಯೇ ಉಳಿಯಿತು. ನೋವು ಕೊಟ್ಟವರು ಹಾಗೆಯೇ ಉಳಿಯುತ್ತಾರೆ ನೋವು ಉಂಡವರು ಜೀವನದಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದುತ್ತಾರೆ ಎಂದು ಬರೆದುಕೊಂಡಿದ್ದಾರೆ.