
ಬೆಂಗಳೂರು: ಪರಸ್ತ್ರೀ ಸ್ನೇಹದಲ್ಲಿದ್ದ ಮಗನ ವರ್ತನೆಯನ್ನು ಪ್ರಶ್ನೆ ಮಾಡಿದ್ದಕ್ಕೆ ಪಿಎಸ್ ಐ ಓರ್ವ ತಾಯಿಯ ಮೇಲೆ ಕೈ ಮಾಡಿರುವ ಘಟನೆ ನಡೆದಿದೆ.
ಪರಸ್ತ್ರೀ ಸಹವಾಸ ಮಾಡಿರುವುದನ್ನು ತಾಯಿ ಪ್ರಶ್ನೆ ಮಾಡಿದ್ದಕ್ಕೆ ಸಬ್ ಇನ್ಸ್ ಪೆಕ್ಟರ್ ತಾಯಿಗೆ ಕಪಾಳಮೋಕ್ಷ ಮಾಡಿದ್ದಾರೆ. ರಾಮಮೂರ್ತಿ ನಗರ ಠಾಣೆಯ ಪಿಎಸ್ ಐ ಮಂಜುನಾಥ್ ವಿರುದ್ಧ ಈ ಆರೋಪ ಕೇಳಿಬಂದಿದೆ.
ಹಲ್ಲೆಗೊಳಗಾದ ತಾಯಿ ಮಂಗಳಮ್ಮ ಎಂಬುವವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪಿಎಸ್ ಐ ಮಂಜುನಾಥ್, ಆತನ ಗೆಳತಿ ಸೇರಿದಂತೆ ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ದೊಡ್ದಬಳ್ಳಾಪುರ ಮೂಲದ ಮಂಜುನಾಥ್ ರಾಮಮೂರ್ತಿ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಪತ್ನಿ ಸಹ ನಗರ ಸಂಚಾರ ಪೊಲೀಸ್ ಠಾಣೆಯೊಂದರಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಲ್ಲಿ ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದಾಗ್ಯೂ ಕಳೆದ ಒಂದು ವರ್ಷದಿಂದ ಮಂಜುನಾಥ್, ಮಹಿಳೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಬುದ್ಧಿ ಹೇಳಿದರೂ ಬಿಟ್ಟಿಲ್ಲ ಎಂದು ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.