ಬೆಂಗಳೂರು: 545 ಹುದ್ದೆಗಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದೆ.
ಮರು ಪರೀಕ್ಷೆಯನ್ನು ರದ್ದು ಮಾಡಬೇಕೆಂದು ಕೋರಿ ಅನೇಕ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯ ಮನವಿ ಆಲಿಸಿದ ನ್ಯಾಯಮೂರ್ತಿ ಜಿ. ನರೇಂದರ್ ಅವರಿದ್ದ ವಿಭಾಗಿಯ ಪೀಠ ಮುಂದಿನ ಆದೇಶದವರೆಗೆ ಮರುಪರೀಕ್ಷೆ ದಿನಾಂಕ ಪ್ರಕಟಿಸಬಾರದು ಎಂದು ಮಧ್ಯಂತರ ಆದೇಶ ಹೊರಡಿಸಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಪಿ.ಎಸ್. ರಾಜಗೋಪಾಲ್, ಡಿ.ಆರ್. ರವಿಶಂಕರ್, ಎ.ಎಸ್. ಪೊನ್ನಣ್ಣ ಅವರು ವಾದ ಮಂಡಿಸಿ, ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, 32 ಮಂದಿ ಕಳಂಕಿತರು ಎಂದು ಗುರುತಿಸಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಕಳಂಕಿತರು ಮತ್ತು ಕಳಂಕಿತರಲ್ಲದವರನ್ನು ಪ್ರತ್ಯೇಕ ಮಾಡಲು ಅವಕಾಶ ಇರುವುದರಿಂದ ಮರು ಪರೀಕ್ಷೆ ನಡೆಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವಕೇಟ್ ಜನರಲ್ ಆರ್. ಸುಬ್ರಹ್ಮಣ್ಯ ವಾದ ಮಂಡಿಸಿದ್ದಾರೆ. ಮನವಿ ಆಲಿಸಿದ ನ್ಯಾಯಪೀಠ ನ್ಯಾಯಾಲಯದ ಮುಂದಿನ ಆದೇಶದವರೆಗೆ ಮರುಪರೀಕ್ಷೆ ದಿನಾಂಕ ಪ್ರಕಟಿಸಬಾರದು ಎಂದು ಮಧ್ಯಂತರ ಆದೇಶ ಹೊರಡಿಸಿದೆ.