ಕಲ್ಬುರ್ಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆಯನ್ನು ಸಿಐಡಿ ಮುಂದುವರಿಸಿರುವಂತೆಯೇ ಒಂದೊಂದೇ ಸಂಗತಿಗಳು ಬಹಿರಂಗವಾಗುತ್ತಿವೆ. ಬಂಧಿತ ಸಿಪಿಐ ಆನಂದ ಮೇತ್ರೆ ಕಿಂಗ್ ಪಿನ್ ಗಳೊಂದಿಗೆ ಸೇರಿ ಡೀಲ್ ಕುದುರಿಸಿದ್ದಲ್ಲದೇ, ಪ್ರಶ್ನೆಪತ್ರಿಕೆಯನ್ನು ಲೀಕ್ ಮಾಡುವಲ್ಲಿಯೂ ನೆರವು ನೀಡಿದ್ದರು ಎನ್ನುವುದು ವಿಚಾರಣೆ ವೇಳೆ ಗೊತ್ತಾಗಿದೆ.
ಕಲ್ಬುರ್ಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆ ಅವರನ್ನು 4 ಅಭ್ಯರ್ಥಿಗಳಿಂದ ಸುಮಾರು ಎರಡು ಕೋಟಿ ರೂಪಾಯಿಗೆ ಡೀಲ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ವಿಚಾರಣೆ ಸಂದರ್ಭದಲ್ಲಿ ಅನೇಕ ಮಾಹಿತಿಗಳು ಗೊತ್ತಾಗಿದೆ.
ಬಂಧಿತ ಆನಂದ ಮೇತ್ರೆ ವಿಚಾರಣೆಯಲ್ಲಿ ಮಹತ್ವದ ಅಭ್ಯರ್ಥಿ ಮಾಹಿತಿ ಗೊತ್ತಾಗಿದ್ದು, ಅಭ್ಯರ್ಥಿಗಳಿಂದ 2 ಕೋಟಿ ರೂಪಾಯಿ ಪಡೆದಿದ್ದರು. ಪರೀಕ್ಷಾ ಕೇಂದ್ರಕ್ಕೆ ಉತ್ತರಗಳನ್ನು ಪೂರೈಸುತ್ತಿದ್ದರು. ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅವರು ಆಗಾಗ ಪರೀಕ್ಷಾ ಕೇಂದ್ರದೊಳಗೆ ಹೋಗಿಬರುತ್ತಿದ್ದರು. ಇದರಿಂದ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಕಿಂಗ್ ಪಿನ್ ಗಳು ಸಿದ್ಧಪಡಿಸಿ ಕಳುಹಿಸುತ್ತಿದ್ದ ಸರಿ ಉತ್ತರಗಳನ್ನು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ನೀಡುತ್ತಿದ್ದರು. ಅಲ್ಲಿ ಒಎಂಆರ್ ಶೀಟ್ ಗಳಲ್ಲಿ ಸರಿ ಉತ್ತರ ತುಂಬುವ ಕೆಲಸ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.