ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮೊದಲ ರ್ಯಾಂಕ್ ಪಡೆದು ಆಯ್ಕೆಯಾಗಿದ್ದ ರಚನಾ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ರಚನಾ ಪಿಎಸ್ಐ ನೇಮಕಾತಿ ಅಕ್ರಮ ಆರೋಪ ಕೇಳಿ ಬಂದ ಸಂದರ್ಭದಲ್ಲಿ ಸರ್ಕಾರ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿದ್ದ ಕ್ರಮ ವಿರೋಧಿಸಿ ಅಭ್ಯರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ್ದರು. ಮುಂಚೂಣಿಯಲ್ಲಿದ್ದುಕೊಂಡು ಪ್ರತಿಭಟನೆ ನಡೆಸಿದ್ದ ರಚನಾ ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದರು.
ಕಳೆದ ಮೂರೂವರೆ ತಿಂಗಳಿನಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದ ಮತ್ತು ಹಲವಡೆ ವಾಸ್ತವ್ಯ ಬದಲಾಯಿಸುತ್ತಿದ್ದ ರಚನಾ ಅವರನ್ನು ಆಳಂದ ತಾಲೂಕಿನ ಹಿರೋಳ್ಳಿ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ. ಸಿಐಡಿ ಶಂಕರಗೌಡ ಪಾಟೀಲ ಡಿಟೆಕ್ಟಿವ್ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ರಚನಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಕಲಬುರ್ಗಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ. ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಟ್ರಾನ್ಸಿಟ್ ವಾರೆಂಟ್ ಪಡೆದುಕೊಂಡು ರಚನಾ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.