ಬೆಂಗಳೂರು: 545 ಪಿಎಸ್ಐ ನೇಮಕಾತಿ ಪರೀಕ್ಷೆ ರದ್ದು ಮಾಡಿದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಮಾಡಿರುವುದನ್ನು ಪ್ರಶ್ನಿಸಿ ಕೆಎಟಿಯಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್. ರವಿಶಂಕರ್ ವಾದ ಮಂಡಿಸಿದ್ದಾರೆ.
ದೈಹಿಕ ಪರೀಕ್ಷೆ ಈಗಾಗಲೇ ಮುಕ್ತಾಯವಾಗಿದೆ. ಲಿಖಿತ ಪರೀಕ್ಷೆಯ ಮುಕ್ತಾಯವಾಗಿ ಫಲಿತಾಂಶ ಬಂದಿದೆ. ಪ್ರಬಂಧ ಮಾದರಿಯಲ್ಲಿ 50 ಅಂಕಕ್ಕೆ ಪರೀಕ್ಷೆ ಇದೆ. ಓಎಂಆರ್ ನಲ್ಲಿ ನಡೆದ ಪರೀಕ್ಷೆ ಬಗ್ಗೆ ಆರೋಪವಿದ್ದು, ತನಿಖೆಯಲ್ಲಿ ಕಳಂಕಿತರನ್ನು ಪ್ರತ್ಯೇಕಿಸುವುದು ಸುಲಭ. 545 ಅಭ್ಯರ್ಥಿಗಳಿಗೂ ಸಿಐಡಿ ಪತ್ರ ಬರೆದಿದೆ. ಒಂದು ಕೇಂದ್ರದಲ್ಲಿ ಮಾತ್ರ ಅಕ್ರಮ ನಡೆದಿದೆ. ಇದಕ್ಕಾಗಿ ಸಂಪೂರ್ಣ ಪರೀಕ್ಷೆ ರದ್ದು ಮಾಡುವುದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲ ರವಿಶಂಕರ್ ವಾದ ಮಂಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಪ್ರತಿಬಾರಿ ಶತಕ ಬಾರಿಸುವುದಿಲ್ಲ. ಹೀಗಾಗಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮತ್ತೆ ಪರೀಕ್ಷೆ ಅಗತ್ಯವಿಲ್ಲ. ಮುಂದಿನ ಆದೇಶದವರೆಗೆ ಪರೀಕ್ಷೆ ನಡೆಸದಂತೆ ತಡೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಕೆಎಟಿ ನೋಟಿಸ್ ಜಾರಿ ಮಾಡಿ ಆದೇಶ ಹೊರಡಿಸಿದ್ದು, ಮುಂದಿನ ವಿಚಾರಣೆಯನ್ನು ಮೇ 18 ಕ್ಕೆ ಮುಂದೂಡಲಾಗಿದೆ.