ಹಾಸನ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ-ಮಗ ಸೇರಿದಂತೆ ಮೂವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಹಾಸನ ಜಿಲ್ಲೆ ಶ್ರವಣಬೆಳಗೊಳ ತಾಲೂಕು ಗ್ರಾಮ ಪಂಚಾಯಿತಿ ಸದಸ್ಯ ಕೇಶವ ಮತ್ತು ಅದೇ ಗ್ರಾಮದ ನಾರಾಯಣಪ್ಪ ಹಾಗೂ ಪಿಎಸ್ಐ ನೇಮಕಾತಿಯಲ್ಲಿ ಆಯ್ಕೆಯಾಗಿರುವ ನಾರಾಯಣಪ್ಪನ ಮಗ ವೇಣುಗೋಪಾಲ ಅವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಕೇಶವ ತಮಗೆ ಆತ್ಮೀಯರಾಗಿದ್ದ ನಾರಾಯಣಪ್ಪನ ಮಗನನ್ನು ಪಿಎಸ್ಐ ಮಾಡಲು ಡೀಲ್ ಕುದುರಿಸಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಮಾಹಿತಿ ಆಧರಿಸಿ ಇವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೇಶವ ಅವರ ಸಂಬಂಧಿಕರು ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮೂಲಕ ಡೀಲ್ ಕುದುರಿಸಿಕೊಂಡು ವೇಣುಗೋಪಾಲ್ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದ ಎನ್ನಲಾಗಿದೆ.