ಯಾದಗಿರಿಯಲ್ಲಿ ಮೃತಪಟ್ಟಿರುವ ಪಿಎಸ್ಐ ಪರಶುರಾಮ್ ಕಡು ಬಡತನದಲ್ಲಿಯೂ ಪರಿಶ್ರಮದಿಂದ ಓದಿ 8 ಸರ್ಕಾರಿ ನೌಕರಿಗಳನ್ನು ಪಡೆದುಕೊಂಡಿದ್ದರು.
ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ಪರಶುರಾಮ ಅವರು ಬುದ್ಧಿವಂತಿಕೆ ಮತ್ತು ಕಠಿಣ ಪರಿಶ್ರಮ ಪರಿಶ್ರಮದಿಂದ ಒಂದಾದ ಮೇಲೊಂದು ಸರ್ಕಾರಿ ನೌಕರಿ ಪಡೆದುಕೊಂಡಿದ್ದರು. ಅವರ ಪೋಷಕರು ಸೋಮನಾಳ ಗ್ರಾಮದಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು. ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪರಶುರಾಮ ಪದವಿ ಓದುವಾಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಂಡಿದ್ದರು. ಪದವಿ ಪೂರ್ಣಗೊಳಿಸಿದ ನಂತರ ಜೈಲಿನಲ್ಲಿ ವಾರ್ಡನ್ ಆಗಿ ಮೊದಲ ಸರ್ಕಾರಿ ನೌಕಾರಿ ಪಡೆದುಕೊಂಡು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 5 ವರ್ಷ ಕಾರ್ಯನಿರ್ವಹಿಸಿದ್ದಾರೆ.
ನಂತರ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬಳಿಕ ಕೆ.ಎಸ್.ಆರ್.ಟಿ.ಸಿ.ಯಲ್ಲಿ ಸಂಚಾರ ಇನ್ಸ್ಪೆಕ್ಟರ್ ನಂತರ, ಪಿಡಿಓ ಸೇರಿ ಅನೇಕ ಹುದ್ದೆಗಳಿಗೆ ಆಯ್ಕೆಯಾಗಿದ್ದ ಅವರು ಪಿಎಸ್ಐ ಆಗಬೇಕೆನ್ನುವ ಕನಸು ನನಸು ಮಾಡಿಕೊಳ್ಳಲು ಕೆಲಸದ ನಡುವೆಯೂ ಓದುತ್ತಿದ್ದರು.
ನಿರಂತರ ಪ್ರಯತ್ನದಿಂದ 2017ರಲ್ಲಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದರು. ರಾಜ್ಯ ಮುಕ್ತ ವಿವಿಯಲ್ಲಿ ಬಾಹ್ಯ ವಿದ್ಯಾರ್ಥಿಯಾಗಿ ಇಂಗ್ಲೀಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.